ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ ಕಾರ್ಮಿಕರ ಮಕ್ಕಳ ಅನುಕೂಲಕ್ಕಾಗಿ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ತಲಾ ಒಂದು ಶ್ರಮಿಕ ವಸತಿ ಶಾಲೆ ನಿರ್ಮಿಸಲಾಗುವುದು. ಇದಕ್ಕಾಗಿ 1,125.25 ಕೋಟಿ ರೂ. ಅನುದಾನ ನಿಗದಿ ಮಾಡಿ ಕಾರ್ಮಿಕ ಇಲಾಖೆ ಆದೇಶಿಸಿದೆ.
ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರತಿ ಜಿಲ್ಲೆಯಲ್ಲಿ ವಸತಿ ಶಾಲೆ ಸ್ಥಾಪಿಸುವ ಬಗ್ಗೆ ಜುಲೈ 2ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಅದನ್ನು ಅನುಷ್ಠಾನಗೊಳಿಸಲು ಕಾರ್ಮಿಕ ಇಲಾಖೆ ಮುಂದಾಗಿದೆ. ಎಲ್ಲ 31 ಜಿಲ್ಲೆಗಳಲ್ಲಿ ತಲಾ ಒಂದು ಶ್ರಮಿಕ ವಸತಿ ಶಾಲೆ ನಿರ್ಮಾಣಕ್ಕೆ ಆದೇಶಿಸಲಾಗಿದೆ.
ಕಟ್ಟಡ ನಿರ್ಮಾಣ ವಸತಿ ಶಾಲೆ ಆರಂಭಕ್ಕೆ ಅಗತ್ಯವಿರುವ ಪರಿಕರ, ಪೂರೈಕೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸುಂಕ ನಿಧಿಯಿಂದ 1,125.25 ಕೋಟಿ ರೂ. ಭರಿಸುವಮತೆ ಸೂಚಿಸಲಾಗಿದೆ. ಶಾಲೆಗಳ ನಿರ್ವಹಣೆಯನ್ನು ಮಂಡಳಿಯೇ ಭರಿಸುವಂತೆ ನಿರ್ದೇಶನ ನೀಡಲಾಗಿದೆ.
ಆರನೇ ತರಗತಿಯಿಂದ 12ನೇ ತರಗತಿಯ ಮಕ್ಕಳಿಗೆ ಶ್ರಮಿಕ ವಸತಿ ಶಾಲೆಗಳಲ್ಲಿ ಶಿಕ್ಷಣ ನೀಡಲಾಗುವುದು. 7 ತರಗತಿ ಕೊಠಡಿಗಳು, ಐದು ಪ್ರಯೋಗಾಲಯ, ಗ್ರಂಥಾಲಯ, ಬಹು ಚಟುವಟಿಕೆ ಕೊಠಡಿ, ಕ್ರೀಡಾ ಸಾಮಗ್ರಿ ಕೊಠಡಿ, ಕಚೇರಿ ಕೊಠಡಿ ಸಿಬ್ಬಂದಿ ಕೊಠಡಿ ಮತ್ತು ಇತರೆ ಕೊಠಡಿಗಳನ್ನು ನಿರ್ಮಿಸಲಾಗುವುದು. ಇದರೊಂದಿಗೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯ, ಭೋಜನಾಲಯ ಹಾಗೂ ಅಡುಗೆ ಮನೆಯನ್ನು ಪ್ರತ್ಯೇಕವಾಗಿ ನಿರ್ಮಿಸಲು ಕಾರ್ಮಿಕ ಇಲಾಖೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸೂಚನೆ ನೀಡಿದೆ.