ಬೆಂಗಳೂರು: ನೇಕಾರರ ಅಭಿವೃದ್ಧಿಗೆ ಹಲವು ಯೋಜನೆ ಜಾರಿಗೊಳಿಸಲಾಗಿದೆ. ನೇಕಾರರಿಗೆ 5.4 ಕೋಟಿ ರೂ. ಮರು ಪ್ರೋತ್ಸಾಹಧನ ಬಿಡುಗಡೆ ಮಾಡಲಾಗಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಕೇಶವ ಪ್ರಸಾದ್ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿ, ನೇಕಾರರ ಅಭಿವೃದ್ಧಿಗೆ ಸರ್ಕಾರ ನೇಕಾರ ಸಮ್ಮಾನ್ ಯೋಜನೆ, ಉಚಿತ ವಿದ್ಯುತ್ ಪೂರೈಕೆ, ಮಾರುಕಟ್ಟೆ ಪ್ರೋತ್ಸಾಹಧನ ಸೇರಿ ಹಲವು ಯೋಜನೆ ರೂಪಿಸಿದೆ. ಶೇ. 20 ರಿಯಾಯಿತಿ ಮಾರುಕಟ್ಟೆ ಪ್ರೋತ್ಸಾಹ ಧನ ಯೋಜನೆಯಲ್ಲಿ ಕೈಮಗ್ಗ ನೇಕಾರರ ಸಹಕಾರ ಸಂಘ ಹಾಗೂ ಮಹಾಮಂಡಳಿಗೆ 5.4 ಕೋಟಿ ರೂಪಾಯಿ ಮರು ಸಂದಾಯ ಮಾಡಲಾಗಿದೆ ಎಂದು ಹೇಳಿದ್ದಾರೆ.
ನೇಕಾರರ ಅಭಿವೃದ್ಧಿಗೆ ಪೂರಕ ಯೋಜನೆಗಳ ಜಾರಿಗೆ ಸರ್ಕಾರ ಬದ್ಧವಾಗಿದೆ. ಪರಿಣಿತರ ಸಲಹೆ ಅಭಿಪ್ರಾಯ ಪಡೆದು ಜವಳಿ ನೀತಿಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ವಿದ್ಯುತ್ ಮಗ್ಗದ ನೇಕಾರರಿಗೆ 10 ಹೆಚ್.ಪಿ.ವರೆಗೆ ಉಚಿತ, 20 ಹೆಚ್.ಪಿ.ವರೆಗೆ ಪ್ರತಿ ಯೂನಿಟ್ ಗೆ 1.25 ರೂ.ಗಳಂತೆ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಸಲಾಗುತ್ತಿದೆ. ಬಾಕಿ ಹಣವನ್ನು ಸರ್ಕಾರ ವಿದ್ಯುತ್ ಕಂಪನಿಗಳಿಗೆ ಪಾವತಿಸುತ್ತದೆ. ಈ ಯೋಜನೆಯಡಿ 1ರಿಂದ 10ಹೆಚ್.ಪಿ.ವರೆಗಿನ ಸುಮಾರು 29,288 ಘಟಕಗಳು, 10 ರಿಂದ 20 ಹೆಚ್.ಪಿ.ವರೆಗಿನ 2067 ವಿದ್ಯುತ್ ಮಗ್ಗ ಘಟಕಗಳು ಅನುಕೂಲ ಪಡೆದುಕೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.