ಹೊಸಪೇಟೆ(ವಿಜಯನಗರ): ಹಂಪಿ ಎಕ್ಸ್ಪ್ರೆಸ್ ರೈಲಿನಲ್ಲಿ ಸಾಮಾನ್ಯ ದರ್ಜೆ ಟಿಕೆಟ್ ಪಡೆದು ಹೊಸಪೇಟೆಯಿಂದ ಹುಬ್ಬಳ್ಳಿಗೆ ಮತ್ತು ಹುಬ್ಬಳ್ಳಿಯಿಂದ ಹೊಸಪೇಟೆಗೆ ಸ್ಲೀಪರ್ ಕೋಚ್ ಗಳಲ್ಲಿ ಪ್ರಯಾಣಿಸಬಹುದಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ರೈಲು ಪ್ರಯಾಣಿಕರಿಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಹೊಸಪೇಟೆಯಿಂದ ಹುಬ್ಬಳ್ಳಿಯವರೆಗೆ ಹೆಚ್ಚುವರಿ ಶುಲ್ಕನ್ನು ನೀಡದೆ ಪ್ರಯಾಣಿಸುವ ಅವಕಾಶ ಕಳೆದ ಮೂರು ವರ್ಷಗಳಿಂದ ಜಾರಿಯಲ್ಲಿತ್ತು. ಆದರೆ ಕಳೆದ ಒಂದು ವರ್ಷದಿಂದ ಈ ಸೌಲಭ್ಯ ಬಳಸಿಕೊಳ್ಳದಂತೆ ಆಕ್ಷೇಪಿಸಿ ಟಿಕೆಟ್ ಪರೀಕ್ಷಕರು ಹೆಚ್ಚುವರಿ ಶುಲ್ಕ, ದಂಡ ವಿಧಿಸುತ್ತಿದ್ದರು.
ಈ ಕ್ರಮದ ಕುರಿತಾಗಿ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಹಿರಿಯ ಸದಸ್ಯ ಬಾಬುಲಾಲ್ ಜೈನ್, ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಪದಾಧಿಕಾರಿಗಳು ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರಿಗೆ ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿರುವ ಪ್ರಧಾನ ವ್ಯವಸ್ಥಾಪಕರು ಪರಿಷ್ಕೃತ ಆದೇಶ ಹೊರಡಿಸಿದ್ದು, ಈ ಹಿಂದೆ ಜಾರಿಯಲ್ಲಿದ್ದ ಸೌಲಭ್ಯ ಯಥಾಸ್ಥಿತಿ ಮುಂದುವರೆಸಲಾಗಿದೆ.
ಪ್ರತಿದಿನ ಬೆಳಿಗ್ಗೆ 7ಗಂಟೆಗೆ ಹೊಸಪೇಟೆಯಿಂದ ನಿರ್ಗಮಿಸುವ ಮೈಸೂರು -ಹುಬ್ಬಳ್ಳಿ -ಹಂಪಿ ಎಕ್ಸ್ಪ್ರೆಸ್ ರೈಲಿನಲ್ಲಿ ಸಾಮಾನ್ಯ ದರ್ಜೆ ಟಿಕೆಟ್ ಪಡೆದು ಹೊಸಪೇಟೆಯಿಂದ ಹುಬ್ಬಳ್ಳಿಗೆ ಹೆಚ್ಚುವರಿ ಶುಲ್ಕ ನೀಡದೆ ಎಸ್8 ಮತ್ತು ಎಸ್ 9 ಸ್ಲೀಪರ್ ಕೋಚ್ ನಲ್ಲಿ ಪ್ರಯಾಣಿಸಲು ಸೌಲಭ್ಯ ಕಲ್ಪಿಸಲಾಗಿದೆ.
ಹುಬ್ಬಳ್ಳಿಯಿಂದ ಪ್ರತಿದಿನ ಸಂಜೆ 6.30ಕ್ಕೆ ನಿರ್ಗಮಿಸುವ ಹುಬ್ಬಳ್ಳಿ –ಮೈಸೂರು- ಹಂಪಿ ಎಕ್ಸ್ಪ್ರೆಸ್ ರೈಲಿನಲ್ಲಿ ಸಾಮಾನ್ಯ ದರ್ಜೆ ಟಿಕೆಟ್ ಪಡೆದು ಎಸ್5, ಎಸ್6 ಮತ್ತು ಎಸ್ 7 ಸ್ಲೀಪರ್ ಕೋಚ್ ಗಳಲ್ಲಿ ಹೊಸಪೇಟೆವರೆಗೆ ಮಾತ್ರ ಪ್ರಯಾಣಿಸಬಹುದಾಗಿದೆ.
ಪ್ರತಿದಿನ ಮಧ್ಯಾಹ್ನ 1 ಗಂಟೆಗೆ ಹುಬ್ಬಳ್ಳಿಯಿಂದ ನಿರ್ಗಮಿಸುವ ಅಮರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಸಾಮಾನ್ಯ ದರ್ಜೆ ಟಿಕೆಟ್ ಪಡೆದು ಎಸ್8, ಎಸ್9 ಸ್ಲೀಪರ್ ಕೋಚ್ ಗಳಲ್ಲಿ ಬಳ್ಳಾರಿವರೆಗೆ ಪ್ರಯಾಣಿಸುವ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಇದೇ ರೈಲಿನಲ್ಲಿ ಬಳ್ಳಾರಿಯಿಂದ ಹುಬ್ಬಳ್ಳಿವರೆಗೆ ಈ ಸೌಲಭ್ಯ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.