ನವದೆಹಲಿ: ವಂದೇ ಭಾರತ್ ರೈಲು ನಿಲ್ದಾಣಕ್ಕೆ ಬರುವ 15 ನಿಮಿಷ ಮೊದಲು ಟಿಕೆಟ್ ಬುಕ್ ಮಾಡಬಹುದು ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ.
ದಕ್ಷಿಣ ರೈಲ್ವೆ ವಿಭಾಗ ಈ ಹೊಸ ಸೌಲಭ್ಯವನ್ನು ಜಾರಿಗೆ ತಂದಿದೆ. ದಕ್ಷಿಣ ರೈಲ್ವೆ ವಿಭಾಗದಲ್ಲಿ ಸಂಚರಿಸುವ 8 ವಂದೇ ಭಾರತ್ ರೈಲುಗಳಿಗೆ ಇದು ಅನ್ವಯವಾಗುತ್ತದೆ. ವಂದೇ ಭಾರತ್ ರೈಲು ಹೋರಾಟ ಮೇಲೆ ಬುಕಿಂಗ್ ಮಾಡಲು ಅವಕಾಶವಿಲ್ಲ. ನಿಲುಗಡೆ ಸೌಲಭ್ಯ ಇರುವ ನಿಲ್ದಾಣಕ್ಕೆ ಬರುವ 15 ನಿಮಿಷ ಮೊದಲು ಮಾತ್ರ ಟಿಕೆಟ್ ಬುಕಿಂಗ್ ಗೆ ಅವಕಾಶ ನೀಡಲಾಗಿದೆ. ಅದರಲ್ಲಿಯೂ ಈಗಾಗಲೇ ಬುಕಿಂಗ್ ಆಗಿ ಉಳಿದ ಸೀಟುಗಳ ಲಭ್ಯತೆ ಆಧಾರದ ಮೇಲೆ ಸೀಟುಗಳನ್ನು ಬುಕ್ ಮಾಡಬಹುದಾಗಿದೆ.
ಮಂಗಳೂರು –ತಿರುವನಂತಪುರ, ಸೆಂಟ್ರಲ್ ಕೊಯಮತ್ತೂರು -ಬೆಂಗಳೂರು, ಮಂಗಳೂರು ಸೆಂಟ್ರಲ್ -ಮಡಗಾಂವ್, ಮಧುರೈ -ಬೆಂಗಳೂರು ಕಂಟೋನ್ಮೆಂಟ್, ಡಾ.ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ –ವಿಜಯವಾಡ, ಚೆನ್ನೈ ಎಗ್ಮೋರ್ –ನಾಗರಕೋಯಿಲ್ ವಂದೇ ಭಾರತ್ ರೈಲುಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ.
ಈ ಹೊಸ ಸೌಲಭ್ಯದಿಂದಾಗಿ ದಿಢೀರ್ ಪ್ರಯಾಣ ಬೆಳೆಸುವವರಿಗೆ ಅನುಕೂಲವಾಗುತ್ತದೆ. ರೈಲಿನಲ್ಲಿ ಖಾಲಿ ಇರುವ ಸೀಟುಗಳೂ ಭರ್ತಿಯಾಗಲಿವೆ.