ಬೆಂಗಳೂರು : ‘KSRTC’ ನೌಕರರ ಮರಣ ಪರಿಹಾರದ ಮೊತ್ತ 14 ಲಕ್ಷ ರೂ.ಗೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.ಅಪಘಾತ ಹೊರತುಪಡಿಸಿ ಇತರೇ ಯಾವುದೇ ಕಾರಣಗಳಿಂದ ಮೃತಪಟ್ಟ ಪ್ರಕರಣಗಳಲ್ಲಿ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು ರೂ. 10.00 (ಹತ್ತು ಲಕ್ಷ ರೂಪಾಯಿಗಳು) ಲಕ್ಷಗಳಿಂದ ರೂ. 14.00 ಲಕ್ಷಗಳಿಗೆ (ಹದಿನಾಲ್ಕು ಲಕ್ಷ ರೂಪಾಯಿಗಳು) ಹೆಚ್ಚಿಸಿ, ಪರಿಷ್ಕರಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಉಲ್ಲೇಖಿತ ಸುತ್ತೋಲೆಯನ್ವಯ ನೌಕರರ ಕುಟುಂಬ ಕಲ್ಯಾಣ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಗೆ ಸಹಮತಿ ನೀಡಿರುವ ಎಲ್ಲಾ ಸದಸ್ಯ ನೌಕರರು/ಅಧಿಕಾರಿಗಳಿಂದ ಮಾಸಿಕ ರೂ. 350-00 ವಂತಿಕೆಯನ್ನು ಪಡೆದು ನಿಗಮದ ವತಿಯಿಂದ ಪ್ರತಿ ಸದಸ್ಯ ನೌಕರನಿಗೆ ಮಾಸಿಕ ರೂ. 150-00 ವಂತಿಗೆಯನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ಸಾಮಾನ್ಯ ಮರಣ ಪ್ರಕರಣಗಳಲ್ಲಿ ಅವರ ನಾಮನಿರ್ದೇಶಿತರಿಗೆ ರೂ. 10.00 ಲಕ್ಷಗಳು ಹಾಗೂ ಅಪಘಾತದಿಂದ ಮರಣ ಹೊಂದಿದಲ್ಲಿ ರೂ. 50.00 ಲಕ್ಷಗಳ ಪರಿಹಾರ ಮೊತ್ತವನ್ನು ನೀಡುತ್ತಿರುವುದು ಸರಿಯಷ್ಟೆ.
ಸೇವೆಯಲ್ಲಿರುವಾಗ ಸಿಬ್ಬಂದಿಗಳು ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನವರೊಂದಿಗೆ ರೂ. 50.00 ಲಕ್ಷಗಳ ವೇತನ ಆಧಾರಿತ (CSP) ವೈಯಕ್ತಿಕ ಅಪಘಾತ ವಿಮಾ ಯೋಜನೆಯನ್ನು ನವೆಂಬರ್-2022 ರಿಂದ ಜಾರಿಗೆ ತರಲಾಗಿದ್ದು, ದಿನಾಂಕ: 16.01.2025 ರಂದು ಪರಿಷ್ಕೃತ ಒಡಂಬಡಿಕೆಯನ್ನು ಮಾಡಿಕೊಂಡು ಅಪಘಾತ ಮರಣ ಪ್ರಕರಣಗಳಿಗೆ ರೂ. 01.00 ಕೋಟಿಗಳ ಅಪಘಾತ ವಿಮೆಯನ್ನು ಜಾರಿಗೊಳಿಸಲಾಗಿರುತ್ತದೆ. ಆದುದರಿಂದ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ನೀಡುತ್ತಿದ್ದ ರೂ.50.00 ಲಕ್ಷಗಳ ಅಪಘಾತ ಪರಿಹಾರ ಮೊತ್ತವನ್ನು ದಿನಾಂಕ: 16.01.2025 ರಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ವಾರ್ಷಿಕ ಅಂದಾಜು 10 ಅಪಘಾತ ಮರಣ ಪ್ರಕರಣಗಳಿಗೆ ನೀಡುತ್ತಿದ್ದ ತಲಾ ರೂ.50.00 ಲಕ್ಷಗಳ ಪರಿಹಾರ ಮೊತ್ತವನ್ನು ಸ್ಥಗಿತಗೊಳಿಸಿ, ವಾರ್ಷಿಕ ಅಂದಾಜು 144 ಸಾಮಾನ್ಯ ಮರಣ ಪ್ರಕರಣಗಳಿಗೆ ತಲಾ ರೂ. 10.00 ಲಕ್ಷಗಳಿಂದ ರೂ. 14.00 ಲಕ್ಷಗಳಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸಿ ಮಂಡಳಿ ಠರಾವು ಸಂಖ್ಯೆ 9035/11.12.2008 ರ (ಈ) ರಲ್ಲಿ ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಿರುವ ಅಧಿಕಾರದಂತೆ ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.
ಅಪಘಾತ ಹೊರತುಪಡಿಸಿ ಇತರೇ ಯಾವುದೇ ಕಾರಣಗಳಿಂದ ಮೃತಪಟ್ಟ ಪ್ರಕರಣಗಳಲ್ಲಿ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು ರೂ. 10.00 (ಹತ್ತು ಲಕ್ಷ ರೂಪಾಯಿಗಳು) ಲಕ್ಷಗಳಿಂದ ರೂ. 14.00 ಲಕ್ಷಗಳಿಗೆ (ಹದಿನಾಲ್ಕು ಲಕ್ಷ ರೂಪಾಯಿಗಳು) ಹೆಚ್ಚಿಸಿ, ಪರಿಷ್ಕರಿಸಲಾಗಿದೆ.
ಅಪಘಾತ ಮರಣ ಪ್ರಕರಣಗಳಲ್ಲಿ ನೀಡಲಾಗುತ್ತಿದ್ದ ರೂ.50.00 ಲಕ್ಷಗಳ ಅಪಘಾತ ಪರಿಹಾರ ಮೊತ್ತವನ್ನು ದಿನಾಂಕ:16.01.2025 ರಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ.ನೌಕರರ ಮಾಸಿಕ ವಂತಿಕೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
01.09.2025 ರಿಂದ ಜಾರಿಗೆ ಬರುವಂತೆ ಮುಂದುವರೆದ ಸಾಮಾನ್ಯ ಮರಣ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ. ಉಳಿದಂತೆ ಈ ಯೋಜನೆಯ ಅನುಷ್ಠಾನ ಸಂಬಂಧ ಹೊರಡಿಸಿರುವ ಸುತ್ತೋಲೆಗಳಲ್ಲಿ ನೀಡಿರುವ ನಿರ್ದೇಶನಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ತಿಳಿಸಿದೆ.