ಬೆಂಗಳೂರು: ಬಡವರು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲ ಕಲ್ಪಿಸಲು 30*40 ಅಡಿ ನಿವೇಶನದವರೆಗಿನ ಕಟ್ಟಡಗಳಿಗೆ ಪ್ರಾರಂಭಿಕ ಪ್ರಮಾಣ ಪತ್ರ(ಸಿಸಿ), ಸ್ವಾಧೀನ ಪ್ರಮಾಣ ಪತ್ರ(ಒಸಿ) ಪಡೆಯಲು ವಿನಾಯಿತಿ ನೀಡಲಾಗುವುದು.
ವಿಧಾನ ಪರಿಷತ್ ನಲ್ಲಿ ಕರ್ನಾಟಕ ಪಾಲಿಕೆಗಳ ತಿದ್ದುಪಡಿ ಮಸೂದೆ- 2025 ಮಂಡಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಕಡಿಮೆ ಅಪಾಯವಿರುವ ಕಟ್ಟಡಗಳಿಗೆ ಒಸಿ, ಸಿಸಿ ಪಡೆಯುವುದನ್ನು ಕೈ ಬಿಡಲಾಗಿದೆ. 50*80 ಅಡಿವರೆಗಿನ ನಿವೇಶನದಲ್ಲಿರುವ ಕಟ್ಟಡಗಳಿಗೆ ಸಿಸಿ, ಒಸಿ ಬೇಡ ಎಂಬುದು ನನ್ನ ಸಲಹೆಯಾಗಿದೆ. ಆದರೆ, ಸರ್ಕಾರ 30*40 ಅಡಿ ನಿವೇಶನದವರೆಗೆ ವಿನಾಯಿತಿ ನಿಗದಿಪಡಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ನಗರ ಪಾಲಿಕೆಗಳಲ್ಲಿ ಕಟ್ಟಡಗಳ ನಕ್ಷೆ ಮಂಜೂರು ಮಾಡುವ ಪ್ರಾಥಮಿಕ ಹಂತದ ಪ್ರಕ್ರಿಯೆ ಪೂರ್ಣಗೊಳಿಸಲು ವೃತ್ತಿಪರರನ್ನು ನಿಯೋಜಿಸಲಾಗುವುದು. ನಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡುವುದರಿಂದ ಶೀಘ್ರವಾಗಿ ನಕ್ಷೆ ಲಭ್ಯವಾಗುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಿಗೆ ಪಡೆಯಲು ಕನಿಷ್ಠ ಹಾಗೂ ಗರಿಷ್ಠ ಶುಲ್ಕ ನಿಗದಿ ಮಾಡಲಾಗುವುದು. ಪಾಲಿಕೆಗಳ ಆಸ್ತಿಯನ್ನು ಸರ್ಕಾರಿ ಇಲಾಖೆಗಳಿಗೆ ನೀಡುವ ಗುತ್ತಿಗೆ ಅವಧಿಯನ್ನು 5 ವರ್ಷದಿಂದ 30 ವರ್ಷಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಹೇಳಿದ್ದು, ಧ್ವನಿ ಮತದ ಮೂಲಕ ಮಸೂದೆಗೆ ಅಂಗೀಕಾರ ನೀಡಲಾಗಿದೆ.