ರಾಜ್ಯದ ಜನತೆಗೆ ಗುಡ್ ನ್ಯೂಸ್: ಜೂನ್‍ ನಿಂದ ಹಳೆ ಕಂದಾಯ ದಾಖಲೆಗಳು ಅಂಗೈನಲ್ಲೇ ಲಭ್ಯ

 ದಾವಣಗೆರೆ: ಜೂನ್ ನಿಂದ ಹಳೇ ಕಂದಾಯ ದಾಖಲೆಗಳು ಅಂಗೈನಲ್ಲಿ ಲಭ್ಯವಾಗಲಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

 ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಹಾಗೂ ಸರ್ವೆ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕಂದಾಯ ದಾಖಲೆಗಳು ಅಂಗೈನಲ್ಲಿ;

ಕಂದಾಯ ಇಲಾಖೆಯ ಹಳೇ ದಾಖಲೆಗಳನ್ನು ಪಡೆಯಲು ಕಚೇರಿಗೆ ಅರ್ಜಿ ಸಲ್ಲಿಸಿ ಅಲೆದಾಡುವುದನ್ನು ತಪ್ಪಿಸಲು ಆನ್‍ಲೈನ್ ಮೂಲಕವೇ ದಾಖಲೆಗಳನ್ನು ಒದಗಿಸಲು ಇಲಾಖೆ ಮುಂದಾಗಿದ್ದು. ಈಗಾಗಲೇ ಹಳೇ ದಾಖಲೆಗಳ ಡಿಜಿಟಲೀಕರಣ ಕಾರ್ಯ ಪ್ರಗತಿಯಲ್ಲಿದೆ. ಬರುವ ಜೂನ್‍ನಿಂದ ಕಂದಾಯ ಇಲಾಖೆಯ ಎಲ್ಲಾ ದಾಖಲೆಗಳನ್ನು ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ಆನ್ ಲೈನ್ ಮೂಲಕವೇ ಸಾರ್ವಜನಿಕರಿಗೆ ತಲುಪಿಸಲಾಗುತ್ತದೆ. ಇದರಿಂದ ಅನಾವಶ್ಯಕವಾಗಿ ಕಚೇರಿಗೆ ಅಲೆಯುವುದು ತಪ್ಪಲಿದೆ ಮತ್ತು ಪಾರದರ್ಶಕತೆ ಹೆಚ್ಚಲಿದೆ ಎಂದರು.

ಸಾರ್ವಜನಿಕರು ದಾಖಲೆಗಳನ್ನು ಪಡೆಯಲು www.recordroom.karnataka.gov.in    ವೆಬ್‍ಸೈಟ್ ಮೂಲಕ ಸಕಾಲ ಮಾದರಿಯಲ್ಲಿಯೇ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಹಳೇ ದಾಖಲೆಗಳು ಅಗತ್ಯವಿರುವ ಬ್ಯಾಂಕ್, ನ್ಯಾಯಾಲಯಗಳಿಗೂ ಆನ್‍ಲೈನ್‍ನಲ್ಲಿಯೇ ಪರಿಶೀಲನೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದ್ದು ಕಾಗದ ರಹಿತ ಕಚೇರಿ ಮತ್ತು ತ್ವರಿತ ಸ್ಪಂದನೆ ಮಾಡುವ ಕೆಲಸವನ್ನು ಕಂದಾಯ ಇಲಾಖೆ ಮಾಡುತ್ತಿದೆ ಎಂದರು.

ಕಂದಾಯ ಗ್ರಾಮ ರಚನೆ, ಹಕ್ಕುಪತ್ರ ವಿತರಣೆಯಲ್ಲಿ ವಿಳಂಬ ಸಲ್ಲದು:

ದಾಖಲೆಗಳಿಲ್ಲದ ಜನವಸತಿ ಪ್ರದೇಶದಲ್ಲಿ ವಾಸಿಸುವವರಿಗೆ ಗ್ರಾಮಗಳನ್ನು ರಚನೆ ಮಾಡುವ ಮೂಲಕ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡುವ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಬೇಕೆಂದು ಕೃಷ್ಣ ಬೈರೇಗೌಡ ಸೂಚನೆ ನೀಡಿದ್ದಾರೆ.

ಕರ್ನಾಟಕ ಭೂ ಕಂದಾಯ ಕಾಯಿದೆ ಅನ್ವಯ ಜನವಸತಿ ಪ್ರದೇಶಗಳಲ್ಲಿ ವಾಸವಿದ್ದರೂ ವಾರಸುದಾರಿಕೆ ಇಲ್ಲದವರಿಗೆ ಗ್ರಾಮಗಳ ವಿಸ್ತರಣೆ, ಕಂದಾಯ ಗ್ರಾಮ, ಬಡಾವಣೆಯನ್ನಾಗಿ ವಿಸ್ತರಣೆ ಮಾಡುವ ಮೂಲಕ ಮೂಲ ನಿವಾಸಿಗಳಿಗೆ ಹಕ್ಕುಪತ್ರವನ್ನು ನೀಡುವ ಕೆಲಸ ರಾಜ್ಯದಲ್ಲಿ ನಡೆಯುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ 1836 ಹಕ್ಕುಪತ್ರಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಲ್ಲಿ 1784 ಇ-ಸ್ವತ್ತಿಗೆ ಹೋಗಿದ್ದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಈ ದಾಖಲೆಯನ್ನು ನೊಂದಾಯಿಸಲು 1349 ಅರ್ಜಿಗಳನ್ನು ಕಳುಹಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಹಕ್ಕುಪತ್ರಗಳನ್ನು ನೀಡಲು ಅವಕಾಶ ಇದ್ದು ಯಾವುದೇ ಸಬೂಬು ಹೇಳದೆ ಕಾನೂನಿನ ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಂಡು ಬಡವರಿಗೆ ಸಹಾಯ ಮಾಡುವ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.

 94 ಸಿ ಅನ್ವಯ ಅಕ್ರಮ ಸಕ್ರಮದಡಿ ಹಿಂದೆ ಹಕ್ಕುಪತ್ರ ನೀಡಲಾಗಿದ್ದು 30*40 ಅಳತೆ ನಿವೇಶನಕ್ಕೆ ಹಕ್ಕುಪತ್ರ ನೀಡಬಹುದಾಗಿತ್ತು. ಆದರೆ 94ಡಿ ಅನ್ವಯ 4000 ಚ.ಅಡಿವರೆಗೆ ಹಕ್ಕುಪತ್ರವನ್ನು ನೀಡಲು ಅವಕಾಶ ಇದೆ. ಮತ್ತು ಜಿಲ್ಲೆಯಲ್ಲಿರುವ 193 ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮವನ್ನಾಗಿಸಲು ಪ್ರಸ್ತಾಪಿಸಲಾಗಿದ್ದು ಇದರಲ್ಲಿ 156 ತಾಂಡಗಳು ಅನರ್ಹವೆಂದು ತಿರಸ್ಕರಿಸಲಾಗಿದೆ. ಆದರೆ 10 ಮನೆಯಿಂದ 49 ಮನೆಗಳ ವರೆಗೆ ಪ್ರತ್ಯೇಕ ಗ್ರಾಮವಾಗಿ ಮಾಡಲು ಅವಕಾಶ ಇದೆ. ಪರಿಶೀಲನೆ ನಡೆಸದೇ ತಿರಸ್ಕರಿಸಲಾಗಿದೆ. ಮೊಸರಿನಲ್ಲಿ ಕಲ್ಲು ಹುಡುಕುವುದನ್ನು ನೋಡಿದ್ದೇನೆ, ಆದರೆ ಏನು ಇಲ್ಲದೇ ತಿರಸ್ಕರಿಸಲಾಗಿದೆ. ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಲು ಸೂಚನೆ ನೀಡಿ ಹಟ್ಟಿ, ಕಾಲೋನಿ, ಗೊಲ್ಲರಹಟ್ಟಿಗಳ ಪರಿಶೀಲನೆ ಮಾಡಲಾಗಿರುವುದಿಲ್ಲ, ಇವುಗಳನ್ನು ಪರಿಶೀಲಿಸಲು ಸೂಚನೆ ನೀಡಿದರು.

 ಜಿಲ್ಲೆಯಲ್ಲಿ 104 ಕಂದಾಯ ಗ್ರಾಮಗಳನ್ನಾಗಿ ಮಾಡಲು ಗುರುತಿಸಲಾಗಿದ್ದು 66 ಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 12 ಅಧಿಸೂಚನೆಗೆ ಬಾಕಿ ಇದ್ದು ಅನುಮೋದನೆಗಾಗಿ 12 ಗ್ರಾಮಗಳನ್ನು ಕಳುಹಿಸಲಾಗಿದೆ. ಕಂದಾಯ ಹಾಗೂ ಭೂ ದಾಖಲೆಗಳ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಕಂದಾಯ ಇಲಾಖೆ ಅಧಿಕಾರಿಗಳ ಅಂಕಿ ಅಂಶವೇ ಬೇರೆಯಾಗಿದೆ, ಭೂ ದಾಖಲೆಗಳ ಇಲಾಖೆ ಅಧಿಕಾರಿಗಳ ಅಂಕಿ ಅಂಶಗಳೇ ಬೇರೆಯಾಗಿದೆ. ಆದರೆ ಈ ಸ್ಥಿತಿ ಇತರೆ ಜಿಲ್ಲೆಯಲ್ಲಿಲ್ಲ ಎಂದರು.

ದರಖಾಸ್ತು ಪೋಡಿ ಅಭಿಯಾನ ಚಾಲ್ತಿಯಲ್ಲಿದ್ದು ಅನುಬಂಧ-1 ರಲ್ಲಿ 331 ಪ್ರಕರಣಗಳಲ್ಲಿ 2002 ಬ್ಲಾಕ್‍ಗಳನ್ನು ದುರಸ್ಥಿಗೆ ಆಯ್ಕೆ ಮಾಡಿಕೊಂಡು ಇದರಲ್ಲಿ 231 ಪ್ರಕರಣಗಳಲ್ಲಿ 1229 ಬ್ಲಾಕ್ ಅಳತೆ ಮಾಡಲಾಗಿದೆ. ಆದರೆ 62 ಪ್ರಕರಣಗಳಲ್ಲಿ 214 ಬ್ಲಾಕ್‍ಗಳು ಮೇಲುಸಹಿಯಾಗಿವೆ. ಇದರಲ್ಲಿ 40 ಪ್ರಕರಣಗಳಲ್ಲಿ 137 ಬ್ಲಾಕ್‍ಗಳಲ್ಲಿ ಮಾತ್ರ ಪಹಣಿ ಇಂಡೀಕರಣವಾಗಿದೆ. ಇನ್ನೂ 77 ಬ್ಲಾಕ್‍ಗಳು ಇಂಡೀಕರಣಕ್ಕೆ ಬಾಕಿ ಇವೆ, 56 ಪ್ರಕರಣಗಳಲ್ಲಿ 321 ಬ್ಲಾಕ್‍ಗಳು ದುರಸ್ಥಿಗೆ ಬಾಕಿ ಇವೆ. ಮತ್ತು 100 ಪ್ರಕರಣಗಳಲ್ಲಿ 773 ಬ್ಲಾಕ್‍ಗಳು ಅಳತೆಗೆ ಬಾಕಿ ಇವೆ. ಇದಕ್ಕೆ ಸಚಿವರು ಭೂ ದಾಖಲೆಗಳ ಅಧಿಕಾರಿಗಳು ಮತ್ತು ತಹಶೀಲ್ದಾರರು ಸರಿಯಾಗಿ ಕೆಲಸ ಮಾಡಬೇಕು, ಜನರು ಕಚೇರಿಗೆ ಅಲೆಯುವುದನ್ನು ತಪ್ಪಿಸಬೇಕು. ಏಕೆ ನಿಮ್ಮ ಹತ್ತಿರ ಕಡತಗಳನ್ನು ಇಟ್ಟುಕೊಳ್ಳಲಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು ಮುಂದಿನ ದಿನಗಳಲ್ಲಿ ಈಗಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಯವರಿಗೆ ತಿಳಿಸಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

  ಪೌತಿ ಖಾತೆ ಆಂದೋಲನಕ್ಕೆ ಸೂಚನೆ; ಜಿಲ್ಲೆಯಲ್ಲಿ 4 ಲಕ್ಷಕ್ಕೂ ಅಧಿಕ ಏಕ ವ್ಯಕ್ತಿ ಖಾತೆಯ ಪಹಣಿಗಳಿವೆ. ಮತ್ತು ಅನೇಕ ಬಹುಮಾಲಿಕತ್ವ ಪಹಣಿಗಳಿವೆ. 96 ಸಾವಿರಕ್ಕೂ ಹೆಚ್ಚು ಆಸ್ತಿಗಳು ಮೃತರ ಹೆಸರಿನಲ್ಲಿವೆ. ಬಹು ಮಾಲಿಕತ್ವ ಮತ್ತು ಮೃತರ ಹೆಸರಿನಲ್ಲಿ ಪಹಣಿಗಳು ಇರುವುದರಿಂದ ಸರ್ಕಾರಿ ಸವಲತ್ತುಗಳು ಮತ್ತು ಬ್ಯಾಂಕ್‍ನಲ್ಲಿ ಕೃಷಿ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿರುವುನ್ನು ಮನಗಂಡು ಪೌತಿ ಖಾತೆ ಆಂದೋಲನವನ್ನು ಆಯೋಜಿಸುವ ಮೂಲಕ ಗ್ರಾಮದಲ್ಲಿ ಟಾಂ-ಟಾಂ ಹಾಕಿಸಿ ಗ್ರಾಮಸಭೆಗಳನ್ನು ಮಾಡಿ ಜನರೆದುರು ಮಹಜರಿನೊಂದಿಗೆ ಪೌತಿ ಖಾತೆ ಮಾಡಲು ತಿಳಿಸಿ ಮುಂದಿನ ದಿನಗಳಲ್ಲಿ ಇದನ್ನು ಆಂದೋಲದ ರೀತಿ ಮಾಡಲು ತಿಳಿಸಿದರು.

 ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ದಾವಣಗೆರೆ ತಹಶೀಲ್ದಾರರ ಕಚೇರಿಯನ್ನು ಸ್ಥಳಾಂತರಿಸಲು ತಿಳಿಸಿ ಇಲ್ಲಿಯೇ ಭೂ ದಾಖಲೆಗಳ ಇಲಾಖೆ ಮತ್ತು ನೋಂದಣಿ ಇಲಾಖೆಯನ್ನು ಸ್ಥಳಾಂತರಿಸಲು ಮೊದಲನೇ ಮಹಡಿ ನಿರ್ಮಾಣ ಮಾಡಲು ಅನುದಾನ ನೀಡಲು ಪ್ರಸ್ತಾಪಿಸಿದರು. ಇದಕ್ಕೆ ಕಂದಾಯ ಸಚಿವರು ಅಗತ್ಯವಿರುವ ಅನುದಾನ ಒದಗಿಸಲಾಗುತ್ತದೆ ಎಂದರು.

 ಜೂನ್‍ನಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿ ವಿವಿಧ ಸರ್ಕಾರಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿ, ಸರ್ಕಾರದ ಸೌಲತ್ತುಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಲ್ಯಾಪ್‍ಟಾಪ್ ವಿತರಣೆ; ಕಂದಾಯ ಇಲಾಖೆ ಇ-ಕಚೇರಿಯಾಗಿ ಪರಿವರ್ತನೆಯಾಗಿದ್ದು ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಮಾಡಲಾಯಿತು.

 ಸಭೆಯಲ್ಲಿ ದೂಡಾ ಅಧ್ಯಕ್ಷ ದಿನೇಶ್.ಕೆ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read