ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟಡಗಳಿಗೆ ಓಸಿ, ಸಿಸಿ ವಿನಾಯಿತಿ ನೀಡುವ ಬಗ್ಗೆ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿ ಮತ್ತು ರಾಜ್ಯಾದ್ಯಂತ ಕೆಲವು ವರ್ಗದ ಕಟ್ಟಡಗಳಿಗೆ ಸ್ವಾಧಿನಾನುಭವ ಪತ್ರ(ಓಸಿ) ಹಾಗೂ ನಿರ್ಮಾಣ ಕಾರ್ಯ ಆರಂಭ ಪತ್ರ(ಸಿಸಿ)ದಿಂದ ವಿನಾಯಿತಿ ನೀಡುವ ವಿಷಯ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 1,200 ಚದರ ಅಡಿ ವಿಸ್ತೀರ್ಣ ಮೀರದಂತಹ ನಿವೇಶನಗಳಲ್ಲಿ ನೆಲ ಮತ್ತು 2 ಅಂತಸ್ತು ಅಥವಾ ಮೂರು ಅಂತಸ್ತಿನ ಕಟ್ಟಡಗಳಿಗೆ ಓಸಿ ಮತ್ತು ಸಿಸಿ ಪಡೆಯುವುದರಿಂದ ವಿನಾಯಿತಿ ನೀಡುವ ಬಗ್ಗೆ ಚರ್ಚೆ ನಡೆಸಲಾಗುವುದು. ನಕ್ಷೆ ಮಂಜೂರಾತಿ ಪ್ರಕಾರ ಕಟ್ಟಡ ನಿರ್ಮಿಸದೇ ಸಿಸಿ, ಓಸಿ ಹೊಂದಿಲ್ಲದ ಕಟ್ಟಡಗಳಿಗೆ ನೀರು, ವಿದ್ಯುತ್, ಒಳಚರಂಡಿ ಸಂಪರ್ಕ ನೀಡದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದರ ಅನ್ವಯ ಕಳೆದ ಆರು ತಿಂಗಳಿಂದ ರಾಜ್ಯದಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಿಸಲಾದ ಕಟ್ಟಡಗಳಿಗೆ ಓಸಿ, ಸಿಸಿ ನಿರಾಕರಿಸಲಾಗಿದೆ. ಹೀಗಾಗಿ ವಿದ್ಯುತ್, ನೀರಿನ ಸಂಪರ್ಕ ನೀಡಿರಲಿಲ್ಲ. ಇದರಿಂದ ಲಕ್ಷಾಂತರ ಜನ ತೊಂದರೆಗೆ ಒಳಗಾಗಿದ್ದಾರೆ.
ಈ ಹಿನ್ನಲೆಯಲ್ಲಿ ಕಟ್ಟಡ ಉಪ ನಿಯಮಗಳಲ್ಲಿ ತಿದ್ದುಪಡಿ ಮಾಡಿಕೊಂಡು ಸಂಬಂಧಿಸಿದ ನಿರ್ದಿಷ್ಟ ಕಟ್ಟಡಗಳಿಗೆ ರಾಜ್ಯಾದ್ಯಂತ ಸಿಸಿ ಮತ್ತು ಓಸಿಯಿಂದ ವಿನಾಯಿತಿ ನೀಡಲು ಸಂಪುಟ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆ ಇದೆ. 1200 ಚ. ಅಡಿ ಬದಲಿಗೆ 4 ಸಾವಿರ ಚ. ಅಡಿವರೆಗಿನ ಕಟ್ಟಡಗಳಿಗೆ ಓಸಿ, ಸಿಸಿ ವಿನಾಯಿತಿ ನೀಡಬೇಕು. ಇಲ್ಲದಿದ್ದರೆ ಲಕ್ಷಾಂತರ ಕಟ್ಟಡಗಳಿಗೆ ವಿದ್ಯುತ್, ನೀರು, ಒಳಚರಂಡಿ ಸಂಪರ್ಕ ಇಲ್ಲದಂತಾಗುತ್ತದೆ ಎನ್ನಲಾಗಿದ್ದು, ಇಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.