ಬೆಂಗಳೂರು: ಬಹುಕಾಲದಿಂದ ಬಾಕಿ ಉಳಿಸಿಕೊಂಡಿರುವ ನೀರಿನ ಬಿಲ್ ಪಾವತಿಸಿದರೆ ಬಡ್ಡಿ, ದಂಡ ಮತ್ತು ಇತರೆ ಶುಲ್ಕಗಳನ್ನು ಮನ್ನಾ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಈ ಕೊಡುಗೆ ಮೂರು ತಿಂಗಳ ಅವಧಿಗೆ ಮಾತ್ರ ಇರುತ್ತದೆ. ಬಾಕಿ ಬಿಲ್ ಒಂದೇ ಸಲ ಪಾವತಿಸಿದರೆ ಈ ಅವಕಾಶ ಸಿಗಲಿದೆ.
ಸಂಪುಟ ಸಭೆಯ ನಂತರ ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಸಚಿವ ಹೆಚ್.ಕೆ. ಪಾಟೀಲ್, ನೀರಿನ ಬಿಲ್ ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ಬಡ್ಡಿ ದಂಡದ ಹೊರೆಯಿಂದ ಮುಕ್ತಿ ನೀಡಲು ಬೆಂಗಳೂರು ನೀರು ಸರಬರಾಜು ನಿಯಮಾವಳಿಗಳು 1965 ಸಡಿಲಿಕೆ ಮಾಡಲಾಗಿದೆ ಎಂದರು.
ಗ್ರಾಹಕರು ಬಾಕಿ ಬಿಲ್ ಅಸಲು ಮೊತ್ತ ಪಾವತಿಸಿದರೆ ಆ ಮೊತ್ತದ ಮೇಲೆ ಇದುವರೆಗೂ ಆಗಿರುವ ಬಡ್ಡಿ, ದಂಡ ಮತ್ತು ಇತರೆ ಶುಲ್ಕಗಳನ್ನು ಶೇ. 100ರಷ್ಟು ಮನ್ನಾ ಮಾಡಲಾಗುವುದು. ಇದು ಮೂರು ತಿಂಗಳ ಅವಧಿಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಜಲಮಂಡಳಿಯ ಅಂಕಿ ಅಂಶಗಳ ಪ್ರಕಾರ 2025ರ ಫೆಬ್ರವರಿ ಅಂತ್ಯದವರೆಗೆ ಗ್ರಾಹಕರಿಂದ ಮಂಡಳಿಗೆ 701.71 ಕೋಟಿ ರೂ. ಬಾಕಿ ಬರಬೇಕಿದೆ. ಇದರಲ್ಲಿ 439 ಕೋಟಿ ರೂ. ಗ್ರಾಹಕರು ಬಳಸಿದ ನೀರಿಗೆ ಪಾವತಿಸಬೇಕಾದ ಮೊತ್ತವಾಗಿದೆ. ಉಳಿದ ಮೊತ್ತ ಬಾಕಿ ನೀರಿನ ಬಿಲ್ ಮೊತ್ತದ ಮೇಲೆ ವಿಧಿಸಿರುವ ಬಡ್ಡಿ ಹಾಗೂ ದಂಡದ ಮೊತ್ತವಾಗಿದೆ ಎಂದು ಹೇಳಿದ್ದಾರೆ.
