ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ವೃತ್ತಿಪರ ಕೋರ್ಸ್ ಸಿಇಟಿ ಸೀಟು ಹಂಚಿಕೆಗೆ ಹೊಸ ವಿಧಾನ

ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿದ್ಯಾರ್ಥಿ ಸ್ನೇಹಿ ವಿಧಾನವನ್ನು ರೂಪಿಸಿದ್ದು, ಕಾಲೇಜು ಆಯ್ಕೆ ಮಾಡಿಕೊಂಡರೂ ಪ್ರವೇಶ ಪಡೆದುಕೊಳ್ಳದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು.

2025- 26 ನೇ ಸಾಲಿನಿಂದ ಈ ಹೊಸ ವ್ಯವಸ್ಥೆ ಜಾರಿಯಾಗಲಿದ್ದು, ಈ ಪ್ರಕ್ರಿಯೆಯಿಂದ ಹೊರಗೆ ಹೋದವರು 750 ರೂಪಾಯಿ ದಂಡ ಶುಲ್ಕ ಪಾವತಿಸಿ ಮತ್ತೆ ಸೀಟು ಹಂಚಿಕೆಯ ಉಳಿದ ಸುತ್ತುಗಳಿಗೆ ಮರು ಪ್ರವೇಶ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.

ಇಂಜಿನಿಯರಿಂಗ್, ಪಶು ವೈದ್ಯಕೀಯ, ಯೋಗ, ನ್ಯಾಚುರೋಪತಿ, ಬಿ ಫಾರ್ಮಾ, ಫಾರ್ಮಾ ಡಿ., ಆರ್ಕಿಟೆಕ್ಚರ್, ಬಿಎಸ್ಸಿ ಕೃಷಿ ಸೇರಿ ವಿವಿಧ ಕೋರ್ಸ್ ಗಳಿಗೆ ಸಿಇಟಿ ಬರೆದ ವಿದ್ಯಾರ್ಥಿಗಳು ತಾವು ಪಡೆದುಕೊಂಡ ರ್ಯಾಂಕಿಂಗ್ಗೆ ಅನುಗುಣವಾಗಿ ಆಯ್ಕೆ ಮಾಡಿಕೊಂಡ ಕಾಲೇಜುಗಳು ದೊರೆತ ನಂತರ ಚಾಯ್ಸ್ ಒಂದು ನಮೂದಿಸಿ ಪ್ರಾಧಿಕಾರದ ಖಾತೆಗೆ ಶುಲ್ಕ ಪಾವತಿಸುತ್ತಿದ್ದರು. ಅಂತವರು ಆ ಕಾಲೇಜುಗಳಿಗೆ ಕಡ್ಡಾಯವಾಗಿ ಪ್ರವೇಶ ಪಡೆದುಕೊಳ್ಳಬೇಕಿತ್ತು.

ಒಂದು ವೇಳೆ ಅವರು ಪ್ರವೇಶ ಪಡೆದುಕೊಳ್ಳದಿದ್ದರೆ ಸೀಟು ಹಂಚಿಕೆ ಪ್ರಕ್ರಿಯೆಯಿಂದ ಹೊರಗೆ ಹೋಗುತ್ತಿದ್ದರು. ಶುಲ್ಕ ಕೂಡ ಸಿಗುತ್ತಿರಲಿಲ್ಲ.

ಚಾಯ್ಸ್ ಒಂದು ನಮೂದಿಸಿ ಸೀಟು ಸಿಗದೇ ಇದ್ದವರು ಚಾಯ್ಸ್ 2, ಚಾಯ್ಸ್ 3 ನಮೂದಿಸಿ ಮುಂದಿನ ಸುತ್ತಿನಲ್ಲಿ ಭಾಗವಹಿಸುತ್ತಾರೆ. ಮೂರು ಚಾಯ್ಸ್ ಗಳ ಮೂಲಕ ಸೀಟು ಪಡೆಯುತ್ತಿದ್ದವರು ಶುಲ್ಕ ಪಾವತಿಸಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡರು ಕಾಲೇಜುಗಳಿಗೆ ದಾಖಲಾದ ಕುರಿತಾಗಿ ಪ್ರಾಧಿಕಾರಕ್ಕೆ ಖಚಿತ ಮಾಹಿತಿ ದೊರೆಯುತ್ತಿರಲಿಲ್ಲ. ಇದು ಸೀಟ್ ಬ್ಲಾಕಿಂಗ್ ದಂಧೆಗೆ ದಾರಿ ಮಾಡಿಕೊಡುತ್ತಿತ್ತು.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮತ್ತೆ ಪ್ರವೇಶ ಅವಕಾಶ ಕಲ್ಪಿಸಲು ಹೊಸ ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಕಾಲೇಜುಗಳನ್ನು ಆದ್ಯತೆ ಮೇಲೆ ನಮೂದಿಸಿದ ವಿದ್ಯಾರ್ಥಿಗಳಿಗೆ ತಾವು ಬಯಸಿದ ಕಾಲೇಜುಗಳು ಸಿಗದಿದ್ದಾಗ ಚಾಯ್ಸ್ 4 ನಮೂದಿಸಿ ಆಯ್ಕೆ ಪ್ರಕ್ರಿಯೆಯಿಂದ ಹೊರಗೆ ಹೋಗುತ್ತಾರೆ. ಚಾಯ್ಸ್ 4 ನಮೂದು ಮಾಡಿದವರಿಗೆ ಮುಂದಿನ ಸುತ್ತುಗಳಲ್ಲಿ ಅವರಿಗೆ ಅವಕಾಶ ದೊರೆಯುತ್ತಿರಲಿಲ್ಲ. ಈಗ ಹೊಸ ವಿಧಾನದಲ್ಲಿ ಚಾಯ್ಸ್ 4 ನಮೂದಿಸಿದರು 750 ರೂ. ದಂಡಪಾವತಿಸಿ ಮತ್ತೆ ಸೀಟು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read