ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರದಲ್ಲಿ 5 ದಿನ ರಾಗಿ ಮಾಲ್ಟ್ ವಿತರಣೆಗೆ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ನಡೆಸ ಸಂಪುಟ ಸಭೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರದಲ್ಲಿ 3 ದಿನ ವಿತರಣೆ ಮಾಡುತ್ತಿರುವ ರಾಗಿ ಮಾಲ್ಟ್ ಅನ್ನು ವಾರದಲ್ಲಿ 5 ದಿನ ವಿತರಣೆಗೆ ನಿರ್ಧಾರ ಮತ್ತು ಇದರ ಶೇ.25 ವೆಚ್ಚವಾದ ₹27 ಕೋಟಿಯನ್ನು ಭರಿಸಲು ತೀರ್ಮಾನಿಸಲಾಗಿದೆ.
ಬೆ೦ಗಳೂರು ನಗರದ ವಿವಿಧ ಸ್ಥಳಗಳಲ್ಲಿ ಹೊಸದಾಗಿ 6 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ತಗಲುವ ₹956.67 ಕೋಟಿ ವೆಚ್ಚದ ವಿಸ್ತ್ರತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ಪುರಸಭೆಯನ್ನು, ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಪುರಸಭೆಯನ್ನು ಹಾಗೂ ಬೀದರ್ ಜಿಲ್ಲೆಯ ಹೂಮ್ನಾಬಾದ್ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯದ 22 ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ನಗರ ಪ್ರದೇಶಗಳಲ್ಲಿನ ಅತಿ ಹಿಂದುಳಿದ ಕಾಲೋನಿಗಳನ್ನು ಮಾದರಿ ಕಾಲೋನಿಗಳಾಗಿ ಅಭಿವೃದ್ಧಿಪಡಿಸಲು ಕ398 ಕೋಟಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಬೆ೦ಗಳೂರು ನಗರದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸ್ವಂತ ಕಟ್ಟಡ “ಧಾರ್ಮಿಕ ಸೌಧ’ವನ್ನು ₹27.70 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಶಾಖಾ ಕಾಲುವೆಯ ಕಾಮಗಾರಿಗಳಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಗತ್ಯವಿರುವ 271 ಎಕರೆ ಜಮೀನನ್ನು ₹77.35 ಕೋಟಿ ವೆಚ್ಚದಲ್ಲಿ ಖರೀದಿಸಲು ನಿರ್ಧರಿಸಲಾಗಿದೆ.
ಬೇಡ್ತಿ ನದಿಯಿ೦ದ ನೀರನ್ನು ಎತ್ತಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ 107 ಕೆರೆಗಳನ್ನು ತುಂಬಿಸುವ ₹179.50 ಕೋಟಿ ವೆಚ್ಚದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯ ಮೂಲಕ ಹಾವೇರಿ ಜಿಲ್ಲೆಯ ಬ್ಯಾಡಗಿ ಮತ್ತು ಹಾನಗಲ್ ತಾಲೂಕಿನ 137 ಕೆರೆಗಳನ್ನು ತುಂಬಿಸುವ ₹115.60 ಕೋಟಿ ವೆಚ್ಚದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು ಹೀಗಿವೆ.. #CabinetDecisions pic.twitter.com/w0BNnKFZoi
— Siddaramaiah (@siddaramaiah) September 4, 2025