ಬೆಂಗಳೂರು: ಶಾಲೆಗಳಲ್ಲಿಯೇ ಆಧಾರ್ ಅಪ್ಡೇಟ್ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ. ಶಾಲಾ ವಿದ್ಯಾರ್ಥಿಗಳು ಇನ್ನು ಮುಂದೆ ಆಧಾರ್ ನವೀಕರಣಕ್ಕೆ ಸೈಬರ್ ಸೆಂಟರ್ ಗಳಲ್ಲಿ ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲ. ಶಾಲಾ-ಕಾಲೇಜುಗಳಲ್ಲಿ ಆಧಾರ್ ನವೀಕರಣಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಿದೆ.
ವಿದ್ಯಾರ್ಥಿ ವೇತನ, ವಿವಿಧ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಕೆಗೆ ಎದುರಾಗುತ್ತಿದ್ದ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ಮುಂದಾಗಿದೆ. ಐದರಿಂದ ಹದಿನೈದು ವರ್ಷದೊಳಗಿನ ಶಾಲಾ ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಶಾಲಾ ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳಿಗೆ ಹೊಣೆ ನೀಡಲಾಗಿದೆ.
2026ರ ಮಾರ್ಚ್ ಒಳಗೆ ಈ ಕಾರ್ಯ ಮುಗಿಸುವಂತೆ ಗಡುವು ವಿಧಿಸಲಾಗಿದೆ. ಐದು ವರ್ಷದ ಮಕ್ಕಳಿಗೆ ಆಧಾರ್ ಮಾಡಿಸುವಾಗ ಭಾವಚಿತ್ರ, ಬೆರಳಚ್ಚು ದಾಖಲಿಸಲಾಗುವುದು. 15 ವರ್ಷ ವಯಸ್ಸಿಗೆ ಬಂದಾಗ ಆಧಾರ್ ನಲ್ಲಿ ಭಾವಚಿತ್ರ, ಬೆರಳಚ್ಚು ಸೇರಿದಂತೆ ವಿವಿಧ ಮಾಹಿತಿಗಳನ್ನು ಪರಿಷ್ಕರಿಸಬೇಕಿದೆ ಎಂದು ಭಾರತ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಸೂಚನೆ ನೀಡಿದೆ.
ಇತ್ತೀಚೆಗೆ ದೆಹಲಿ ಹಾಗೂ ತಮಿಳುನಾಡು ಶಾಲೆಗಳಲ್ಲಿ ವಿಶೇಷ ಶಿಬಿರ ನಡೆಸಲಾಗಿದ್ದು, ರಾಜ್ಯದಲ್ಲಿಯೂ ಅದೇ ಮಾದರಿಯಲ್ಲಿ ಶಾಲಾ ಮಕ್ಕಳ ಆಧಾರ್ ನವೀಕರಣಕ್ಕೆ ಚಿಂತನೆ ನಡೆದಿದೆ. ಮಾನ್ಯತೆ ಪಡೆದ ಆಧಾರ್ ಏಜೆನ್ಸಿಗಳ ಮೂಲಕ ಶಾಲೆ ಆವರಣದಲ್ಲಿ ವಿಶೇಷ ಶಿಬಿರ ನಡೆಸಿ ಮಕ್ಕಳ ಆಧಾರ್ ನವೀಕರಣ ವ್ಯವಸ್ಥೆ ಸುಲಭಗೊಳಿಸಲು ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ 5 ರಿಂದ 15 ವರ್ಷ ವಯಸ್ಸಿನ 30 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳ ಹಳೆಯ ಆಧಾರ್ ಮತ್ತು ಜನನ ಪ್ರಮಾಣ ಪತ್ರ, ಪೋಷಕರ ಮತ್ತು ಮಗುವಿನ ವಿಳಾಸ ದಾಖಲೆಯೊಂದಿಗೆ ಶಾಲೆಗಳಲ್ಲಿಯೇ ವಿಶೇಷ ಶಿಬಿರ ಮೂಲಕ ಮಾರ್ಚ್ 1ರೊಳಗೆ ಆಧಾರ್ ನವೀಕರಣಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಿದೆ.
