ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ಹೇಳಿಕೊಡುವ ಪ್ರಕ್ರಿಯೆಗೆ ಈ ಶೈಕ್ಷಣಿಕ ವರ್ಷದಿಂದಲೇ ಚಾಲನೆ ನೀಡಲಾಗುವುದು.
ಪ್ರಾದೇಶಿಕ ಆಂಗ್ಲ ಭಾಷಾ ಕೇಂದ್ರ ಕಳೆದ ವರ್ಷವೇ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಆರಂಭಿಸಬೇಕಿತ್ತಾದರೂ ಕಾರಣಾಂತರದಿಂದ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ 2025- 26ನೇ ಶೈಕ್ಷಣಿಕ ಸಾಲಿನ ಆರಂಭದಿಂದಲೇ ವಾರಾಂತ್ಯದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ.
1000 ಶಾಲೆಗಳಲ್ಲಿ 180 ಗಂಟೆಗಳು ಸ್ಪೋಕನ್ ಇಂಗ್ಲಿಷ್ ತರಗತಿ ನಡೆಸಲಾಗುವುದು. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿರುವ ಮಕ್ಕಳು ಇದರ ಅನುಕೂಲ ಪಡೆಯಬಹುದು. ಇದಕ್ಕಾಗಿ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ.
ಸಾಮಾನ್ಯ ಆಂಗ್ಲ ಭಾಷೆ ತರಗತಿಯಲ್ಲಿ ಪಠ್ಯಪುಸ್ತಕದಲ್ಲಿರುವ ವಿಷಯಗಳನ್ನು ಮಾತ್ರ ಬೋಧಿಸಲಾಗುವುದು. ಇದರಿಂದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡುವ ಕೌಶಲ್ಯ ಬರುವುದಿಲ್ಲ. ಆಂಗ್ಲ ಭಾಷೆಯಲ್ಲಿ ಮಾತನಾಡುವುದನ್ನು ಕಲಿಸಿದಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಇಂಗ್ಲೀಷ್ ಕಲಿಯುತ್ತಾರೆ. ಹೀಗಾಗಿ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಆರಂಭಿಸಲಾಗುವುದು.
ಅಲ್ಲದೆ, ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಎಐ ಆಧಾರಿತ ಭಾಷಾ ಕಲಿಕೆ ಕೂಡ ಜಾರಿಯಾಗಲಿದೆ. ರಾಜ್ಯದಲ್ಲಿ 4190 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಅನುಷ್ಠಾನಗೊಳಿಸಿದ್ದು, ಮುಂದಿನ ದಿನಗಳಲ್ಲಿ ಮತ್ತೆ 4 ಸಾವಿರ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತೆರೆಯಲಾಗುವುದು ಎಂದು ಹೇಳಲಾಗಿದೆ.