ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ರೆವಿನ್ಯೂ ಸೈಟ್ ಗಳಿಗೆ ಇ- ಖಾತಾ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಕಂದಾಯ ನಿವೇಶನದಂತಹ ಅನಧಿಕೃತ ಆಸ್ತಿಗಳಿಗೆ ಪ್ರತ್ಯೇಕ ಖಾತೆ ನೀಡಿ ದಂಡ ವಿಧಿಸಿ ತೆರಿಗೆ ವ್ಯಾಪ್ತಿಗೆ ತರಲು ಅವಕಾಶ ಕಲ್ಪಿಸುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ-2025ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ರಾಜ್ಯ ಸರ್ಕಾರವು ಕಾಯ್ದೆ ಜಾರಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆ ವ್ಯಾಪ್ತಿಯ ಆಸ್ತಿಗಳು ನಕ್ಷೆ ಮಂಜೂರಾತಿ ಪಡೆಯದೆ ಕಂದಾಯ ನಿವೇಶನದಲ್ಲಿ ಮತ್ತು ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳನ್ನು ಬಿ ರಿಜಿಸ್ಟರ್ ನಡಿ ಇ-ಖಾತಾ ನೀಡಲು ತೀರ್ಮಾನಿಸಲಾಗಿತ್ತು. ಇದೇ ಮಾದರಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿರುವ ಆಸ್ತಿಗಳಿಗೆ ಖಾತೆ ನೀಡಿ ತೆರಿಗೆ ವ್ಯಾಪ್ತಿಗೆ ತರಲು ವಿಧೇಯಕದಲ್ಲಿ 199 ಬಿ ಮತ್ತು 199 ಸಿಗೆ ತಿದ್ದುಪಡಿ ತರಲಾಗಿದೆ. ಈ ಮೂಲಕ ಗ್ರಾಮೀಣ ಭಾಗದ ಕಂದಾಯ ನಿವೇಶನಗಳಿಗೆ ಇ-ಖಾತೆ ನೀಡಲು ಸರ್ಕಾರ ಅವಕಾಶ ನೀಡಲಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ಅಧಿನಿಯಮ -2025 ಕ್ಕೆ ರಾಜ್ಯಪಾಲರು ಅಂಗೀಕಾರ ನೀಡಿದ್ದಾರೆ. ಈ ಮೂಲಕ ನಗರ, ಪಟ್ಟಣ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಜಾರಿಗೆ ಬಂದಿರುವ ಅನಧಿಕೃತ ಆಸ್ತಿಗಳಿಗೆ ಬಿ-ಖಾತಾ ಸ್ವರೂಪದ ಇ- ಖಾತೆ ನೀಡುವ ವ್ಯವಸ್ಥೆ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆಯಾಗಲಿದೆ.

ಗ್ರಾಮೀಣ ಪ್ರದೇಶದ ಅನಧಿಕೃತ ನಿವೇಶನ ಕಟ್ಟಡ ಬಡಾವಣೆಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಅದರ ಮಾಲೀಕರಿಗೆ ನೆಮ್ಮದಿ ನೀಡುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ. ಅನಧಿಕೃತ ನಿವೇಶನ ಮತ್ತು ಬಡಾವಣೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ರೂಪದಲ್ಲಿ ಆರ್ಥಿಕ ಬಲವರ್ಧನೆಗೆ ಅನುಕೂಲವಾಗುತ್ತದೆ.

ಇದುವರೆಗೂ ಅಗತ್ಯಸೇವೆ ಕಲ್ಪಿಸುತ್ತಿದ್ದರೂ ಗ್ರಾಮೀಣ ಸಂಸ್ಥೆಗಳು ಆದಾಯ ವಂಚಿತವಾಗಿದ್ದವು. ಈ ಬಿ-ಖಾತಾ ಸ್ವರೂಪದ ಇ- ಖಾತಾ ನೀಡುವುದರಿಂದ ಅಂತಹ ಆಸ್ತಿಗಳು ತೆರಿಗೆ ಪಾವತಿಸಬೇಕಾಗುತ್ತದೆ. ಮೊದಲ ವರ್ಷದಲ್ಲಿ ಎರಡು ಪಟ್ಟು ತೆರಿಗೆ ಪಾವತಿಸಬೇಕಿದ್ದು, ನಂತರ ವಾರ್ಷಿಕ ಆಸ್ತಿ ತೆರಿಗೆ ಮಾತ್ರ ವಿಧಿಸಲಾಗುವುದು.

ಇಂತಹ ಆಸ್ತಿಗಳನ್ನು ಪ್ರತ್ಯೇಕ ರಿಜಿಸ್ಟರ್ ನಲ್ಲಿ ನಮೂದಿಸಲಾಗುತ್ತದೆ. ಇಂತಹ ಅನಧಿಕೃತ ಕಟ್ಟಡ, ನಿವೇಶನ ಬಡಾವಣೆಗೆ ಬಿ-ಖಾತಾ ನೀಡಿದ ಕೂಡಲೇ ಮಾಲೀಕತ್ವ ಬರುವುದಿಲ್ಲ. ಹಕ್ಕುಸ್ವಾಮ್ಯ ಸಾಧಿಸಲು ಆಗುವುದಿಲ್ಲ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read