ಬೆಂಗಳೂರು: ಗ್ರಾಮ ಪಂಚಾಯಿತಿಗಳ ಸಂಪನ್ಮೂಲ ಹೆಚ್ಚಳದ ಉದ್ದೇಶದೊಂದಿಗೆ ಅಕ್ರಮ ಲೇಔಟ್ ಗಳ ನಿವೇಶನಗಳಿಗೆ ಇ-ಖಾತಾ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇ- ಸ್ವತ್ತು 2.0 ತಂತ್ರಾಂಶ ಅಭಿವೃದ್ಧಿಪಡಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿ ಚಾಲನೆ ನೀಡಲಿದ್ದಾರೆ.
ಗ್ರಾಮ ಠಾಣಾಗಳ ಹೊರೆಗೆ ಭೂ ಪರಿವರ್ತನೆ ಮಾಡಿಸದೆ ಮನೆ ನಿರ್ಮಿಸಿಕೊಂಡವರಿಗೆ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ ಇತರೆ ಸೌಲಭ್ಯಗಳನ್ನು ನೀಡಲಾಗಿದೆ. ಇದರಿಂದ ಗ್ರಾಮ ಪಂಚಾಯಿತಿಗಳಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಹೀಗಾಗಿ ತೆರಿಗೆ ವ್ಯಾಪ್ತಿಗೆ ತರಲು ಸರ್ಕಾರ ನಿಯಮ ರೂಪಿಸಿದೆ. ಹೊಸ ಆಸ್ತಿಗಳ ತೆರಿಗೆ ವ್ಯಾಪ್ತಿಗೆ ತರಲಾಗಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ ನಿವೇಶನಗಳಿಂದ ಸಕ್ರಮವಾಗಲಿದ್ದು, ರಾಜ್ಯದ್ಯಂತ 90 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಅಧಿಕೃತ ಮಾನ್ಯತೆ ಸಿಗಲಿದೆ. ಅರ್ಜಿ ಸಲ್ಲಿಸಿದ 15 ದಿನದಲ್ಲಿ ಇ-ಖಾತಾ ಸಿಗಲಿದೆ.
ತಂತ್ರಾಂಶದ ಮೂಲಕ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರ ಆಸ್ತಿಗಳಿಗೆ ಡಿಜಿಟಲ್ ಇ- ಸ್ವತ್ತು ಪ್ರಮಾಣ ಪತ್ರ ವಿತರಣೆ ಆರಂಭಿಸಲಾಗುವುದು. ಆಸ್ತಿ ಸಂಬಂಧಿತ ಸೇವೆಗಳನ್ನು ಪಾರದರ್ಶಕ ಮತ್ತು ತ್ವರಿತವಾಗಿ ಒದಗಿಸಲು ಉದ್ದೇಶಿಸಲಾಗಿದೆ. ತಂತ್ರಾಂಶದ ಮೂಲಕ ಇ- ಸ್ವತ್ತು ಪಡೆಯಲು ಎದುರಾಗುವ ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಸಹಾಯವಾಣಿ 94834 76000 ಸ್ಥಾಪಿಸಲಾಗಿದೆ.
ಗ್ರಾಮೀಣ ಆಸ್ತಿ ಮಾಲೀಕರು https://eSwathu.karnataka.gov.in ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಪ್ರಕ್ರಿಯೆ ಆರಂಭಿಸಬಹುದು.
