ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ 5 ಕೆಜಿ ಅಕ್ಕಿ ಬದಲಿಗೆ ಪ್ರತಿ ಪಡಿತರ ಚೀಟಿಗೆ ಇಂದಿರಾ ಆಹಾರ ಕಿಟ್ ವಿತರಣೆ ಯೋಜನೆಯನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದ್ದು, ಜನವರಿಯಿಂದ ಇಂದಿರಾ ಕಿಟ್ ಫಲಾನುಭವಿಗಳ ಕೈ ಸೇರುವ ಸಾಧ್ಯತೆ ಇದೆ.
ಪಡಿತರ ಚೀಟಿದಾರರ ಸಂಖ್ಯೆಗೆ ಅನುಗುಣವಾಗಿ ಮೂರು ವಿಭಾಗಗಳಾಗಿ ವಿಂಗಡಿಸಿ ಇಂದಿರಾ ಕಿಟ್ ನಲ್ಲಿ ಆಹಾರ ಪದಾರ್ಥ ವಿತರಿಸಲಾಗುವುದು. ಒಬ್ಬರು ಅಥವಾ ಇಬ್ಬರು ಸದಸ್ಯರು ಇದ್ದಲ್ಲಿ 750 ಗ್ರಾಂ ತೊಗರಿ ಬೇಳೆ, ಅರ್ಧ ಲೀಟರ್ ಅಡುಗೆ ಎಣ್ಣೆ, ಅರ್ಧ ಕೆಜಿ ಸಕ್ಕರೆ, ಅರ್ಧ ಕೆಜಿ ಉಪ್ಪು ನೀಡಲಾಗುವುದು.
ಮೂವರು ಅಥವಾ ನಾಲ್ವರು ಸದಸ್ಯರಿಗೆ ಒಂದೂವರೆ ಕೆಜಿ ತೊಗರಿ ಬೇಳೆ, ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೆಜಿ ಸಕ್ಕರೆ, ಒಂದು ಕೆಜಿ ಉಪ್ಪು ನೀಡಲಾಗುವುದು.
5 ಮತ್ತು 5ಕ್ಕಿಂತ ಹೆಚ್ಚು ಸದಸ್ಯರಿದ್ದಲ್ಲಿ 2ಕೆಜಿ 250 ಗ್ರಾಂ ತೊಗರಿ ಬೇಳೆ, ಒಂದೂವರೆ ಲೀಟರ್ ಅಡುಗೆ ಎಣ್ಣೆ, ಒಂದೂವರೆ ಕೆಜಿ ಸಕ್ಕರೆ, ಒಂದೂವರೆ ಕೆಜಿ ಉಪ್ಪು ನೀಡಲಾಗುವುದು. ಇಂದಿರಾ ಕಿಟ್ ನಲ್ಲಿ ವಿತರಿಸಲು ಅಗತ್ಯವಾದ ಆಹಾರ ಪದಾರ್ಥಗಳನ್ನು ಆಹಾರ ಇಲಾಖೆಯ ಆಯುಕ್ತರು ಟೆಂಡರ್ ಆಹ್ವಾನಿಸಿ ಖರೀದಿಸಬೇಕು. ಆಹಾರ ಪದಾರ್ಥಗಳ ಪ್ರಮಾಣ ಮತ್ತು ಗುಣಮಟ್ಟ ಖಚಿತಪಡಿಸಿಕೊಂಡು ಪ್ರತಿ ಕಿಟ್ ಗೆ ಜಿಎಸ್‌ಟಿ, ಪ್ಯಾಕೇಜಿಂಗ್, ಸಾಗಣೆ ವೆಚ್ಚ, ಸಹಾಯಧನ, ಚಿಲ್ಲರೆ ಲಾಭಾಂಶ, ಲೋಡಿಂಗ್, ಅನ್ ಲೋಡಿಂಗ್, ಮೂರನೇ ವ್ಯಕ್ತಿಯಿಂದ ಗುಣಮಟ್ಟ ತಪಾಸಣೆ ವೆಚ್ಚ ಸೇರಿ ಗರಿಷ್ಠ ಒಟ್ಟು ಮಿತಿ 422.88 ರೂಪಾಯಿ ಎಂದು ತಿಳಿಸಲಾಗಿದೆ.
