ಬೆಂಗಳೂರು: ಜಾತಿ ಪ್ರಮಾಣ ಪತ್ರ ನೀಡುವ ಸಾಫ್ಟ್ವೇರ್ ಸಿದ್ಧಪಡಿಸಲಾಗಿದ್ದು, ನವೆಂಬರ್ 10 ರಂದು ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.
ಸರ್ಕಾರ ಒಳ ಮೀಸಲಾತಿ ಜಾರಿ ಕುರಿತು ಆದೇಶಿಸಿದ್ದರೂ ಅನುಷ್ಠಾನಕ್ಕೆ ಅಗತ್ಯವಿರುವ ಪ್ರಮಾಣ ಪತ್ರ ವಿತರಿಸಲು ವ್ಯವಸ್ಥೆ ಸಿದ್ಧವಾಗಿರಲಿಲ್ಲ. ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಇ- ಆಡಳಿತ ಇಲಾಖೆ ತಂತ್ರಾಂಶವನ್ನು ಸಿದ್ಧಪಡಿಸಿದ್ದು ಪ್ರಯೋಗ ನಡೆಯುತ್ತಿತ್ತು.
ಈ ನಡುವೆ ಒಳ ಮೀಸಲಾತಿ ಸೌಲಭ್ಯದಲ್ಲಿ ವೈದ್ಯಕೀಯ ಸೀಟು ಪಡೆಯಲು ಜಾತಿ ಪ್ರಮಾಣ ಪತ್ರ ಮಂಡಿಸಬೇಕೆಂಬ ಆದೇಶ 15 ದಿನಗಳಿಂದಲೂ ಗೊಂದಲ, ಆತಂಕ ಮೂಡಿಸಿದ್ದು, ಈಗಾಗಲೇ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಅಧಿಕೃತವಾಗಿ ಮಾದಿಗ, ಛಲವಾದಿ ಸಮುದಾಯದವರು ತಾವು ಯಾವ ಗುಂಪಿಗೆ ಸೇರಿದ್ದೇವೆ ಎಂಬ ಕುರಿತು ಪ್ರಮಾಣ ಪತ್ರ ಪಡೆದುಕೊಳ್ಳಬಹುದು.
ಮಾದಿಗ ಮೂಲ ಜಾತಿಯವರು ಜಾತಿ ಸೂಚಕ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರಕ್ಕೆ ಸೇರಿದವರು ಆಗಿದ್ದರೆ ಪ್ರವರ್ಗ ಎ, ವಲಯ ಮೂಲ ಜಾತಿಯವರು ಜಾತಿ ಸೂಚಕ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರಕ್ಕೆ ಸೇರಿದವರಾಗಿದ್ದರೆ ಪ್ರವರ್ಗ ಬಿ ಎಂದು ಪ್ರಮಾಣ ಪತ್ರ ಪಡೆದುಕೊಳ್ಳಬಹುದಾಗಿದೆ.
ಈ ಪ್ರಮಾಣ ಪತ್ರ ಪಡೆದವರು ಒಳ ಮೀಸಲಾತಿ ಅಡಿ ಶಿಕ್ಷಣ, ಉದ್ಯೋಗ, ಸಾಲ, ಮನೆ, ಕೊಳವೆ ಬಾವಿ ಸೇರಿ ಎಲ್ಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಮಾದಿಗ ಸಮುದಾಯದವರು ತಮ್ಮ ಕೇಂದ್ರಗಳಲ್ಲಿ ಅಗತ್ಯ ದಾಖಲೆ ಸಲ್ಲಿಸಿ ಪ್ರವರ್ಗ ಗುಂಪಿನ ಪ್ರಮಾಣ ಪತ್ರ ಪಡೆದು ಒಳ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳುವಂತೆ ಮಾಜಿ ಸಚಿವ ಹೆಚ್. ಆಂಜನೇಯ ಮನವಿ ಮಾಡಿದ್ದಾರೆ.
