ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ವತಿಯಿಂದ ನಿರ್ಮಿಸಿರುವ ಫ್ಲ್ಯಾಟ್, ವಿಲ್ಲಾ ಕ್ರಯಪತ್ರ ಮೇಳವನ್ನು ಬಿಡಿಎ ಕೇಂದ್ರ ಕಚೇರಿಯಲ್ಲಿ ಅ. 3ರಿಂದ 16ರವರೆಗೆ ಆಯೋಜಿಸಲಾಗಿದೆ.
ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಫ್ಲ್ಯಾಟ್ ಗಳನ್ನು ಖರೀದಿಸಿ ಹಂಚಿಕೆ ಪತ್ರ ಪಡೆದುಕೊಂಡಿರುವ ಎಲ್ಲಾ ಫ್ಲ್ಯಾಟ್ ಮತ್ತು ವಿಲ್ಲಾ ಖರೀದಿದಾರರು ನೋಂದಾಯಿಸಿಕೊಳ್ಳಬಹುದಾಗಿದೆ.
ಖರೀದಿದಾರರು ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪ್ರಮಾಣ ಪತ್ರ, ಬ್ಯಾಂಕ್ ಎನ್ಒಸಿ, ಫೋಟೋ ದೃಢೀಕರಣ, ಫ್ಲ್ಯಾಟ್ ಮೌಲ್ಯ ರೂ. 50 ಲಕ್ಷಕ್ಕೂ ಹೆಚ್ಚಿದ್ದರೆ 16ಬಿ ಮತ್ತು 26 ಕ್ಯೂಬಿ ಸಲ್ಲಿಸಬೇಕು. ಮೂರು ಪಾಸ್ಪೋರ್ಟ್ ಅಳತೆ ಫೋಟೋಗಳೊಂದಿಗೆ ತಮ್ಮ ಫ್ಲ್ಯಾಟ್ ಅಥವಾ ವಿಲ್ಲಾದ ಪೂರ್ತಿ ಹಣ ಪಾವತಿಸಿ ಎಲ್ಲಾ ದಾಖಲೆಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು.
ಪ್ರಾಧಿಕಾರದಿಂದ ನೀಡುವ ನಿರಾಕ್ಷೇಪಣಾ ಪತ್ರ ಅಥವಾ ಬ್ಯಾಂಕ್ ನಿಂದ ಸಾಲ ಪಡೆದುಕೊಂಡಿದ್ದಲ್ಲಿ ಬ್ಯಾಂಕ್ ನಿಂದ ನಿರಕ್ಷೇಪಣಾ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ನೋಂದಣಿ ಶುಲ್ಕವನ್ನು ಪ್ರತ್ಯೇಕವಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾವೇರಿ 2.0 ತಂತ್ರಾಂಶದಲ್ಲಿ ಫ್ಲ್ಯಾಟ್ ನ ಒಟ್ಟು ಮೌಲ್ಯದಲ್ಲಿ ರೂ. 20 ಲಕ್ಷದವರೆಗೆ ಶೇಕಡ 4.26 ರಷ್ಟು, ರೂ. 45 ಲಕ್ಷದವರೆಗೆ ಇದ್ದರೆ ಶೇಕಡ 5.39 ರಷ್ಟು, ರೂ. 45 ಲಕ್ಷಕ್ಕಿಂತ ಮೇಲ್ಪಟ್ಟ ಮೌಲ್ಯದ ಫ್ಲ್ಯಾಟ್ ಆಗಿದ್ದರೆ ಫ್ಲ್ಯಾಟ್ ಮೌಲ್ಯದ ಒಟ್ಟು ಶೇಕಡ 7.65 ರಷ್ಟು ಶುಲ್ಕ ಪಾವತಿಸಬೇಕು.
ನೋಂದಣಿ ಮತ್ತು ಮುದ್ರಾಂಕ ಶುಲ್ಕ ದೃಢೀಕರಿಸಿದ ಬಳಿಕ ಹಂಚಿಕೆದಾರರು ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿಕೊಂಡಲ್ಲಿ ಫ್ಲ್ಯಾಟ್ ಅಧಿಕ ಉಪ ನೋಂದಣಾಧಿಕಾರಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆವರಣದಲ್ಲಿ ನೋಂದಾಯಿಸಿ ಕೊಡಲಾಗುತ್ತದೆ.
ಅ.3ರ ನಂತರ ಮೇಳದಲ್ಲಿ ಫ್ಲ್ಯಾಟ್ ಖರೀದಿಸಿದವರು ಫ್ಲ್ಯಾಟ್ ಪೂರ್ಣ ಮೊತ್ತ ಪಾವತಿಸಿ ದಾಖಲೆ ಸಲ್ಲಿಸಿದಲ್ಲಿ ಆದ್ಯತೆ ಮೇರೆಗೆ ಕೆಲಸದ ಐದು ದಿನ ಅವಧಿಯೊಳಗೆ ನೋಂದಣಿ ಮಾಡಿಸಲಾಗುವುದು. ಕ್ರಯಾಪತ್ರ ನೋಂದಣಿ ಮೇಳವನ್ನು ಬಿಡಿಎ ಕೇಂದ್ರ ಕಚೇರಿ, ಚೌಡಯ್ಯ ರಸ್ತೆ, ಕುಮಾರ ಪಾರ್ಕ್ ಪಶ್ಚಿಮ, ಬೆಂಗಳೂರು 20 ಇಲ್ಲಿ ನಡೆಸಿ ಕ್ರಯಪತ್ರ ನೋಂದಾಯಿಸಿ ಕೊಡಲಾಗುವುದು ಎಂದು ಹೇಳಲಾಗಿದೆ.