ಬೆಂಗಳೂರು: ರಾಜ್ಯದಲ್ಲಿ ಸುಮಾರು 52 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿವೆ. ಈ ಪೈಕಿ ಪೌತಿ ಖಾತೆ ಆಂದೋಲನದ ಮೂಲಕ 3,35,727 ಪ್ರಕರಣಗಳಲ್ಲಿ ಮೃತರ ಹೆಸರಿನಿಂದ ಅವರ ವಾರಸುದಾರರ ಹೆಸರಿಗೆ ಜಮೀನು ವರ್ಗಾವಣೆ ಮಾಡಲಾಗಿದೆ, ಆದರೆ ಈ ಕಾರ್ಯ ತೃಪ್ತಿಕರವಾಗಿಲ್ಲ. ಶೀಘ್ರವೇ ಎಲ್ಲಾ ತಾಲೂಕುಗಳಲ್ಲಿಯೂ ಅಭಿಯಾನ ಮಾದರಿಯಲ್ಲಿ ಪೌತಿ ಖಾತೆ ಕೈಗೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ತಹಶೀಲ್ದಾರ್ ಗಳ ಜೊತೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಮೃತರ ಹೆಸರಿನಲ್ಲಿರುವ ಜಮೀನುಗಳಿಗೆ ಪಿಎಂ ಕಿಸಾನ್, ಹನಿ ನೀರಾವರಿ, ಯಂತ್ರೋಪಕರಣ ಖರೀದಿ ಸಬ್ಸಿಡಿ ನೀಡದಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಹೀಗಾಗಿ ರೈತರಿಗೆ ತೊಂದರೆಯಾಗುತ್ತದೆ. ಜನರಿಂದ ಅರ್ಜಿ ಕರೆಯದೆ ನಾವೇ ರೈತರ ಮನೆ ಬಾಗಿಲಿಗೆ ತೆರಳಿ ಅಭಿಯಾನದ ಮಾದರಿಯಲ್ಲಿ ಪೌತಿ ಖಾತೆ ಮಾಡಿ ಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಬೇಕು ಎಂದು ತಿಳಿಸಿದ್ದಾರೆ.
ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿದರೆ ಕೆಲಸ ಮುಗಿಯುವುದಿಲ್ಲ. ಬದಲಿಗೆ ಇ-ಖಾತಾ ಜನರೇಟ್ ಮಾಡಿ ಇ- ಆಸ್ತಿಯನ್ನು ಕೂಡ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ತಹಶೀಲ್ದಾರ್ ಕಚೇರಿಗಳಲ್ಲಿರುವ ಭೂ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ಸ್ಕ್ಯಾನ್ ಮಾಡಿ ಡಿಜಿಟಲ್ ಗೊಳಿಸಲಾಗುತ್ತಿದೆ. ಈ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ತಹಶೀಲ್ದಾರ್ ಗಳಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯಾದ್ಯಂತ ಪೋಡಿ ದುರಸ್ತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ನಾನಾ ಕಾರಣಗಳಿಂದ ಅನೇಕ ಜಮೀನು ಪೋಡಿ ದುರಸ್ತಿಯಾಗಿಲ್ಲ. ರೈತರು ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ. ಹೀಗಾಗಿ ಪೋಡಿ ದುರಸ್ತಿ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಹೇಳಿದ್ದಾರೆ.