ಬೆಂಗಳೂರು: ಈರುಳ್ಳಿ ದರ ಕುಸಿತವಾದ ಹಿನ್ನೆಲೆಯಲ್ಲಿ ಪ್ರೈಸ್ ಡಿಪಿಷಿಯೆನ್ಸಿ ಪ್ರೊಕ್ಯೂರ್ ಮೆಂಟ್ ಸ್ಕೀಂ(ಪಿಡಿಪಿಎಸ್) ಅಡಿಯಲ್ಲಿ ಈರುಳ್ಳಿ ಖರೀದಿಸಲು ಪ್ರಯತ್ನ ನಡೆದಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಮುಂಗಾರು ಋತುವಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಅಪಾರ ಪ್ರಮಾಣದ ಈರುಳ್ಳಿ ನಾಶವಾಗಿದೆ. ಕಳೆದ ಸಾಲಿನ ಸರಾಸರಿ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಈ ಬಾರಿ ಮಾರಾಟ ದರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇದೆ. ಹೀಗಾಗಿ ಖರೀದಿಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಸೇರಿ ಒಟ್ಟು 2.05 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ವಾರ್ಷಿಕ ಉತ್ಪನ್ನ 27 ಲಕ್ಷ ಮೆಟ್ರಿಕ್ ಟನ್ ಆಗಿದ್ದು, ಈ ಬಾರಿ ಬೆಳೆ ಹಾನಿವಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆ ಅಡಿ ಖರೀದಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶಿಫಾರಸು ಮಾಡಿದ್ದರು. ಆದರೆ, ಪಿಡಿಪಿಎಸ್ ಯೋಜನೆ ಅಡಿ ಖರೀದಿ ಸೂಕ್ತವೆಂದು ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.
