ನವದೆಹಲಿ: ಗ್ರಾಹಕರು ಚೆಕ್ ನೀಡಿದ ಕೆಲವೇ ಗಂಟೆಗಳಲ್ಲಿ ಖಾತೆಗೆ ಹಣ ಪಾವತಿಯಾಗಲಿದೆ. ಚೆಕ್ ಕ್ಲಿಯರೆನ್ಸ್ ನಲ್ಲಿ ಆಗುತ್ತಿದ್ದ ವಿಳಂಬ ಪರಿಗಣಿಸಿ ಆರ್‌ಬಿಐ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ.
ಎರಡು ಹಂತದಲ್ಲಿ ಈ ಬದಲಾವಣೆ ಜಾರಿಗೆ ಬರಲಿದೆ. ಮೊದಲ ಹಂತ ಅಕ್ಟೋಬರ್ 4ರಿಂದಲೇ ಜಾರಿಗೆ ಬರಲಿದೆ. ಸಂಜೆ 7 ಗಂಟೆಯೊಳಗೆ ಚೆಕ್ ಅನ್ನು ಸಂಬಂಧಪಟ್ಟ ಬ್ಯಾಂಕುಗಳು ಕ್ಲಿಯರ್ ಮಾಡಬೇಕು. ತಪ್ಪಿದಲ್ಲಿ ಸಹಜವಾಗಿಯೇ ಆ ಚೆಕ್ ಗಳ ಸ್ವಯಂ ಸ್ವೀಕೃತವಾಗಿ ಹಣ ಪಾವತಿಯಾಗಲಿದೆ.
ಎರಡನೇ ಹಂತವು ಜನವರಿ 3ರಿಂದ ಜಾರಿಗೆ ಬರಲಿದ್ದು, ಮೂರು ಗಂಟೆಯೊಳಗೆ ಚೆಕ್ ಗಳನ್ನು ಸಂಬಂಧಿಸಿದ ಬ್ಯಾಂಕ್ ಗಳು ಸ್ವೀಕೃತ ಅಥವಾ ತಿರಸ್ಕೃತ ಎಂದು ಖಚಿತಪಡಿಸಬೇಕಿದೆ.
ಪ್ರಸ್ತುತ ಬ್ಯಾಂಕಿಂಗ್ ನೆಟ್ವರ್ಕ್ ಗಳು ಚೆಕ್ ಟ್ರಂಕೇಷನ್ ಸಿಸ್ಟಂ ಮೂಲಕ ಸಂಬಂಧಿಸಿದ ಬ್ಯಾಂಕುಗಳಿಗೆ ಚೆಕ್ ಗಳನ್ನು ಸ್ಕ್ಯಾನ್ ಮಾಡಿ ಕಳಿಸಿಕೊಡುತ್ತವೆ. ಬೆಳಗಿನ ಬ್ಯಾಚ್, ಮಧ್ಯಾಹ್ನ ಮತ್ತು ಸಂಜೆ ಬ್ಯಾಚ್ ಗೆ ಹೀಗೆ ಹಂತ ಹಂತವಾಗಿ ಚೆಕ್ ಗಳನ್ನು ಗ್ರಾಹಕರು ಯಾವ ಬ್ಯಾಂಕ್ ಗೆ ನೀಡಿದ್ದಾರೋ ಆ ಬ್ಯಾಂಕ್ ಗೆ ಕಳಿಸಿಕೊಡುತ್ತಾರೆ. ಈ ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಇದನ್ನು ನಿವಾರಿಸಲು ಆರ್.ಬಿ.ಐ. ಸಿಟಿಎಸ್ ಅನ್ನು ನಿರಂತರ ಕ್ರಿಯರಿಂಗ್ ವ್ಯವಸ್ಥೆಯಾಗಿ ರೂಪಾಂತರ ಮಾಡಿದೆ.
ಬ್ಯಾಂಕುಗಳಿಗೆ ಚೆಕ್ ನೀಡಿದ ತಕ್ಷಣ ಅವುಗಳನ್ನು ಕ್ಲಿಯರೆನ್ಸ್ ಗಾಗಿ ಕಳುಹಿಸಲಾಗುವುದು. ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಈ ಕಾರ್ಯ ನಿರಂತರವಾಗಿ ನಡೆಯಲಿದ್ದು, ಪ್ರತಿ ಗಂಟೆಗೊಮ್ಮೆ ಚೆಕ್ ಗಳಿಗೆ ಸಂಬಂಧಿಸಿದ ಹಣದ ಸೆಟಲ್ ಮೆಂಟ್ ಆಗಲಿದೆ. ಚೆಕ್ ಹಾಕಿದ ಕೆಲವೇ ಗಂಟೆಗಳಲ್ಲಿ ಕ್ಲಿಯರಿಂಗ್ ಆಗಿ ಕೂಡಲೇ ಹಣ ಪಾವತಿಯಾಗಲಿದೆ.