ನವದೆಹಲಿ: ನ್ಯಾಯಯುತ ಬೆಲೆಯಲ್ಲಿ ಸಾರ್ವಜನಿಕರಿಗೆ ಖಾದ್ಯ ತೈಲ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಖಾದ್ಯ ತೈಲ ಉದ್ಯಮದ ನಿಯಂತ್ರಣಕ್ಕಾಗಿ ಹೊಸ ನಿಯಮಾವಳಿ ರೂಪಿಸಿದೆ.
ಆಗಸ್ಟ್ 1ರಿಂದಲೇ ಖಾದ್ಯ ತೈಲ ಉದ್ಯಮ ನಿಯಂತ್ರಣ ಆದೇಶ ಜಾರಿಗೊಳಿಸಲಾಗಿದ್ದು, ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ಉತ್ಪಾದಕರ ನೋಂದಣಿಗೆ ಕಟ್ಟುನಿಟ್ಟಿನ ನಿಯಮ ಜಾರಿಯಾಗಿದೆ. ಉತ್ಪಾದಕರು ತಮ್ಮ ಕಾರ್ಖಾನೆ ಸ್ಥಳ, ಉತ್ಪಾದನಾ ಸಾಮರ್ಥ್ಯ ಮತ್ತಿತರ ವಿವರಗಳೊಂದಿಗೆ ಸಕ್ಕರೆ ಮತ್ತು ಖಾದ್ಯ ತೈಲ ನಿರ್ದೇಶನಾಲಯದಲ್ಲಿ ನೋಂದಣಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬೇಕಿದೆ.
ತೈಲ ಉತ್ಪಾದನೆ, ಬಳಕೆ, ಮಾರಾಟ, ದಾಸ್ತಾನು ಮತ್ತಿತರ ವಿವರಗಳನ್ನು ಪ್ರತಿ ತಿಂಗಳ 15ರೊಳಗೆ ಸಲ್ಲಿಸಬೇಕಿದೆ. ಇದರಿಂದಾಗಿ ಖಾದ್ಯ ತೈಲ ಪೂರೈಕೆ ಸರಪಳಿ ಮೇಲೆ ನಿಗಾ ವಹಿಸಲು ಮತ್ತು ನ್ಯಾಯಯುತ ಬೆಲೆಯಲ್ಲಿ ಜನತೆಗೆ ಖಾದ್ಯ ತೈಲ ಸಿಗುವಂತೆ ಮಾಡಲು ಸಾಧ್ಯವಾಗಲಿದೆ. ಕಾರ್ಖಾನೆಗಳ ತಪಾಸಣೆ ವೇಳೆ ತಪ್ಪು ಲೆಕ್ಕ ನೀಡಿದ್ದಲ್ಲಿ ದಾಸ್ತಾನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಹೇಳಲಾಗಿದೆ.