ಪಣಜಿ: ಗೋವಾ ರಾಜ್ಯದಲ್ಲಿ ಪ್ರತಿವರ್ಷ ಜೂನ್ ನಿಂದ ಪ್ರಾರಂಭವಾಗುತ್ತಿದ್ದ ಹೊಸ ಶೈಕ್ಷಣಿಕ ವರ್ಷವನ್ನು ಈ ಬಾರಿ ಜೂನ್ ಬದಲು ಏಪ್ರಿಲ್ ನಲ್ಲಿ ಆರಂಭಿಸಲಾಗಿದೆ.
ಸೋಮವಾರದಿಂದ ಗೋವಾ ರಾಜ್ಯಾದ್ಯಂತ ತರಗತಿಗಳು ಪ್ರಾರಂಭವಾಗಿದ್ದು, ಶಾಲಾ ಆರಂಭದ ಮೊದಲ ದಿನವೇ ಬಹುತೇಕ ಶಾಲೆಗಳಲ್ಲಿ ಶೇಕಡ 90ರಷ್ಟು ಹಾಜರಾತಿ ಕಂಡು ಬಂದಿದೆ. ಗೋವಾ ರಾಜ್ಯದಲ್ಲಿ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಏಪ್ರಿಲ್ ನಿಂದಲೇ ಶೈಕ್ಷಣಿಕ ವರ್ಷ ಪ್ರಾರಂಭಿಸಲಾಗಿದೆ.
ಎರಡು ತಿಂಗಳು ಮೊದಲೇ ಶಾಲೆ ಆರಂಭಿಸಿರುವ ಬಗ್ಗೆ ವಿದ್ಯಾರ್ಥಿಗಳು ಸಂತೋಷಪಟ್ಟಿದ್ದರೆ, ಕೆಲವರು ಬಿಸಿಲಿನ ವಾತಾವರಣ ಇರುವ ಕಾರಣ ಅಸಮಾಧಾನ ತೋರಿಸಿದ್ದಾರೆ. ಗೋವಾ ಸರ್ಕಾರದ ಅಂಕಿ ಅಂಶಗಳ ಪ್ರಕಾರ 2153 ಶಾಲೆಗಳಲ್ಲಿ 5ರಿಂದ 12ನೇ ತರಗತಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರೆಲ್ಲರಿಗೆ ಸೋಮವಾರವೇ ತರಗತಿ ಆರಂಭಿಸಲಾಗಿದೆ. ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಭಿಪ್ರಾಯ ಪಡೆದುಕೊಂಡಿದ್ದಾರೆ.