ಬೆಂಗಳೂರು: ಕಸ ಎಸೆದಿದ್ದನ್ನು ಪ್ರಶ್ನೆ ಮಾಡಿದಕ್ಕೆ ಪೌರ ಕಾರ್ಮಿಕನ ಮೇಲೆಯೇ ದಂಪತಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಶ್ರೀನಿವಾಸನಗರದಲ್ಲಿ ನಡೆದಿದೆ.
ನಾಗೇಂದ್ರ ಹಲ್ಲೆಗೊಳಗಾದ ಪೌರಕಾರ್ಮಿಕ. ಘಟನೆ ಸಂಬಂಧ ಪೌರ ಕಾರ್ಮಿಕ ನಾಗೇಂದ್ರ ದೂರು ಆಧರಿಸಿ ಗೋವಿಂದರಾಜನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ನಾಗೇಂದ್ರ ಶ್ರೀನಿವಾಸನಗರ ಬಳಿ ಕಸ ಸ್ವಚ್ಛ ಮಾಡುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ದಂಪತಿ ಸ್ವಚ್ಛಗೊಳಿಸಿದ ಜಾಗದಲ್ಲಿ ಕಸ ಸುರಿದಿದ್ದಾರೆ. ಇದನ್ನು ನಾಗೇಂದ್ರ ಪ್ರಶ್ನೆ ಮಾಡಿದ್ದಾರೆ. ಕಸದ ಆಟೋ ಬರುತ್ತದೆ ಅದಕ್ಕೆ ಕಸ ಹಾಕಿ ಎಂದು ಹೇಳಿದ್ದಾರೆ. ಅಷ್ಟಕ್ಕೆ ದಂಪತಿ ನಾಗೇಂದ್ರ ಜೊತೆ ಗಲಾಟೆ ಮಾಡಿದ್ದಾರೆ. ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ.
ನೀನು ಕಸ ಗುಡಿಸುವವನು. ನಮಗೆ ಆರ್ಡರ್ ಮಾಡಬೇಡ. ನಮ್ಮ ಬಗ್ಗೆ ನಿನಗೆ ಗೊತ್ತಿಲ್ಲ ಎಂದು ಆವಾಜ್ ಹಾಕಿದ್ದಾರೆ. ಹಲ್ಲೆಗೊಳಗಾದ ನಾಗೇಂದ್ರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.