ಮಂಗಳೂರು: ಗಣೇಶೋತ್ಸವ ಮಂಟಪದ ಬಳಿ ನಿಯಮ ಮೀರಿ ದ್ವನಿವರ್ಧಕ ಬಳಸಿದ್ದಲ್ಲದೇ ಪ್ರಶ್ನೆ ಮಾಡಿದ ಪೊಲೀಸರ ವಿರುದ್ಧವೇ ವಾಗ್ವಾದ ನಡೆಸಿ, ಕರ್ತವ್ಯಕ್ಕೆ ಅಡ್ದಿಪಡಿಸಿದ ಆರೋಪದಲ್ಲಿ ಗಣೇಶೋತ್ಸವ ಸಮಿತಿ ಪಪಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಬಂಗ್ಲೆ ಮೈದಾನದ ಬಳಿ ಪುಂಜಾಲಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ತಡರಾತ್ರಿವರೆಗೂ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ನಡೆಸುತ್ತಿದ್ದರು. ಇದನ್ನು ಗಮನಿಸಿದ ಪುಂಜಾಲಕಟ್ಟೆ ಠಾಣೆಯ ಪಿಎಸ್ ಐ ಧ್ವನಿವರ್ಧಕ ಬಳಕೆಯ ಬಗ್ಗೆ ಜಾರಿಯಲ್ಲಿರುವ ಕಾನೂನು ಪಾಲಿಸುವಂತೆ ಮತ್ತು ಧ್ವನಿವರ್ಧಕ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಸಂಘಟಕರು ಕೆಲ ಕಾಲ ಪಾಲನೆ ಮಾಡಿದ್ದಾರೆ. ಆದರೆ ರಾತ್ರಿ 11:50ರ ಸುಮಾರಿಗೆ ಮತ್ತೆ ಧ್ವನಿವರ್ಧಕ ಬಳಕೆ ಮಾಡಿ ಕಾರ್ಯಕ್ರಮ ನಡೆಸಿದ್ದರು. ಸ್ಥಳಕ್ಕೆ ತೆರಳಿ ಪೊಲೀಸರು ಪ್ರಶ್ನಿಸಿದಾಗ ಸಮಿತಿ ಅಧ್ಯಕ್ಷ ಕೌಶಿಕ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಸೇರಿ 11-15 ಜನರು ವಾಗ್ವಾದ ನಡೆಸಿದ್ದಾರೆ.
ಪೊಲೀಸರಿಗೆ ಧಿಕ್ಕಾರ ಕೂಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.