ನೈತಿಕ ರಾಜಕಾರಣಕ್ಕೆ ಗಾಂಧೀಜಿ ಹಾಗೂ ಶಾಸ್ತ್ರೀಜಿ ಮಾದರಿ : ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ

ಚಿತ್ರದುರ್ಗ :   ಸತ್ಯ ಹಾಗೂ ಅಹಿಂಸೆ ಎಂಬ ಅಸ್ತ್ರಗಳಿಂದ ಬ್ರಿಟೀಷರ ವಿರುದ್ದ ಹೋರಾಡಿದ ಮಹಾತ್ಮ ಗಾಂಧೀಜಿ, ಈ ಎರಡೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಇವರ ಹಾದಿಯಲ್ಲೇ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರು ನಡೆದರು. ನೈತಿಕ ರಾಜಕಾರಣಕ್ಕೆ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರು ಮಾದರಿಯಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಏರ್ಪಡಿಸಲಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಾಂಧೀಜಿಯವರ ಜೀವನವೇ ನಮಗೆಲ್ಲ ಸಂದೇಶ. ಸತ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಗಾಂಧೀಜಿಯವರು ನಡೆಸಿದ ಪ್ರಯತ್ನವನ್ನು ಅವರ ಆತ್ಮಕಥನದಲ್ಲಿ ನಾವು ಕಾಣಬಹುದು. ಹೋರಾಟದ ಜೊತೆಗೆ ವೈಯಕ್ತಿಕವಾಗಿ ಎದುರಿಸಿದ ದೌರ್ಬಲ್ಯಗಳ ಬಗ್ಗೆ ಆತ್ಮಚರಿತ್ರೆಯಲ್ಲಿ ನಿರ್ಭಯದಿಂದ ಹೇಳಿಕೊಂಡಿದ್ದಾರೆ. ನಾವೆಲ್ಲರು ಗಾಂಧೀ ಮಾರ್ಗದಲ್ಲಿ ಸಾಗಿದರೆ ನೈತಕವಾಗಿ ಬಲವಾಗಿರುವ ಸ್ವಸ್ಥ ಸಮಾಜವನ್ನು ನಿರ್ಮಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.

ಪ್ರಸ್ತುತ ಜಗತ್ತಿನಾದ್ಯಂತ ಹಿಂಸೆ ತಾಂಡವವಾಡುತ್ತಿದೆ. ಯುವ ಜನತೆ ಭ್ರಮಾಲೋಕದಲ್ಲಿ ಇದ್ದಾರೆ. ಸತ್ಯ ಸಂಗತಿಗಳಿಂದ ದೂರವಾಗಿದ್ದಾರೆ. ಓದು ಎನ್ನುವುದು ಕೇವಲ ಕೆಲಸ ಗಿಟ್ಟಿಸಿಕೊಳ್ಳುವ ಮಾರ್ಗವಾಗಿ ಉಳಿದಿದೆ. ಯುವ ಜನತೆ ಬುದ್ದ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ಮಾರ್ಗದಲ್ಲಿ ಸಾಗಬೇಕು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಲಾಲ್ ಬಹದ್ದೂರ್ ಶಾಸ್ತ್ರೀ ವ್ಯಕ್ತಿತ್ವ ಮಹೋನ್ನತವಾದುದು. ಶಾಸ್ತ್ರೀಜಿ ಅವರ ಪ್ರಾಮಾಣಿಕತೆ ಹಾಗೂ ಕರ್ತವ್ಯಪರತೆ ನಮಗೆಲ್ಲಾ ಮಾದರಿ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ್ಯ ತಾಜ್‍ಪೀರ್ ಮಾತನಾಡಿ, ಸ್ವಾತ್ಯಂತ್ರ ಹೋರಾಟಕ್ಕೆ ಧುಮುಕುವ ಮುನ್ನ ಗಾಂಧೀಜಿ ದೇಶವನ್ನು ಸುತ್ತಿ ಬಡ ಜನರ ಜೀವನವನ್ನು ಅರಿತುಕೊಂಡರು. ತಮ್ಮ ಐಶಾರಾಮಿ ಜೀವನವನ್ನು ತ್ಯಜಿಸಿ ಬಡವರ ಶ್ರೇಯೋಭಿವೃದ್ಧಿಗಾಗಿ ದುಡಿದರು. ಅರೆ ಬಟ್ಟೆಯ ದೋತಿ ಹಾಗೂ ಖಾದಿ ವಸ್ತ್ರ ಧರಿಸಿ ಗಾಂಧೀಜಿ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿ ಬ್ರಿಟನ್ ರಾಜನನ್ನು ಭೇಟಿಯಾದರು. ಸ್ವಾತ್ಯಂತ್ರ ಹೋರಾಟದ ಜೊತೆಗೆ ದೇಶದ ಸಾಮಾಜಿಕ ಸುಧಾರಣೆಗೂ ಗಾಂಧೀಜಿ ಕೊಡುಗೆ ನೀಡಿದ್ದಾರೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ ಮಾತನಾಡಿ ಮಹಾತ್ಮ ಗಾಂಧೀಜಿ ಸತ್ಯ ಅಂಹಿಸೆಯ ಮೂಲಕ ರಕ್ತರಹಿತವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು ಎಂದರು.

ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಕುರಿತು ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲ ಡಾ.ಹೆಚ್.ಗುಡ್ಡದೇಶ್ವರಪ್ಪ, ನಾವು ಯಾವುದೇ ಕೆಲಸ, ಸೇವೆ ಮಾಡಬೇಕಾದರೆ ವಾಸ್ತವಿಕ ನೆಲೆಗಟ್ಟಿನ ಆಧಾರದ ಮೇಲೆ ಇರಬೇಕು. ವಾಸ್ತಾವಿಕತೆಯನ್ನು ನಾವು ಗಾಂಧೀಜಿಯವರಿಂದ ಕಲಿತುಕೊಳ್ಳಬೇಕಿದೆ. ಶೋಷಣೆ, ವರ್ಣವ್ಯವಸ್ಥೆಯಿಂದ ನಲುಗಿಹೋಗಿದ್ದ ರೈತರ ಹಾಗೂ ಶೋಷಿತರ ಅಂತರಾಳವನ್ನು ಕಂಡುಕೊಳ್ಳುವ ಪ್ರಯತ್ನಪಟ್ಟ ಅವರು, ಸತ್ಯವನ್ನೇ ದೇವರು ಎಂದು ಅರಿತು ಅಹಿಂಸಾ ಮಾರ್ಗದ ಮೂಲಕ ಸತ್ಯವನ್ನು ಕಂಡುಕೊಂಡವರು ಗಾಂಧೀಜಿ ಎಂದು ಹೇಳಿದರು.

ಗಾಂಧೀಜಿಯವರ ಆಲೋಚನೆಗಳು, ಚಿಂತನೆಗಳು ಬಹಳ ಶ್ರೇಷ್ಟತೆಯಿಂದ ಕೂಡಿವೆ. ಗಾಂಧೀಜಿಯವರು ಅವರ ದೌರ್ಬಲ್ಯಗಳನ್ನು ಸಹ ಬಹಿರಂಗ ಪಡಿಸುವ ಮೂಲಕ ಆತ್ಮವಿಮರ್ಶೆ ಮೂಲಕ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಗಾಂಧೀಜಿಯವರು ನಾಯಕರಷ್ಟೇ ಅಲ್ಲದೇ ನಾಯಕರನ್ನು ಬೆಳೆಸಿದವರು. ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗದೇ ಜಾಗತಿಕ ಮಟ್ಟದಲ್ಲಿಯೂ ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಸೇರಿದಂತೆ ಹಲವು ನಾಯಕರು ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ ಅವರು, ಸರ್ವರ ಕಲ್ಯಾಣಕ್ಕಾಗಿ ಶ್ರಮಿಸಿದ ಗಾಂಧೀಜಿಯವರು ಸಮಾಜ ಸುಧಾರಕ, ಸಂತ, ದಾರ್ಶನಿಕರು ಹೌದು ಎಂದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು, ರಾಜಕೀಯ ಎನ್ನುವುದು ಸೇವೆ, ರಾಜಕೀಯ ಸೇವೆಗೆ ಪ್ರಾಮಾಣಿಕತೆಯ ಸ್ಪರ್ಶ ಬೇಕು ಎಂದು ಅರ್ಥೈಸಿದ ಮಹಾನ್ ಚೇತನ ಎಂದು ಅಭಿಪ್ರಾಯಪಟ್ಟರು.

ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ತತ್ವಾದರ್ಶಗಳು ಒಂದೇ ರೀತಿಯಾಗಿದ್ದು, ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿವೆ. ತಾವು ಪ್ರತಿಪಾದಿಸಿದ ಆದರ್ಶಗಳಂತೆ ಬದುಕಿದ ಈ ಇಬ್ಬರೂ ಮಹನೀಯರು ಜನಸಾಮಾನ್ಯರು ಹಾಗೂ ದೇಶದ ಒಳಿತಿಗಾಗಿ ಶ್ರಮಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ ಹಾಗೂ ಸತ್ಯದ ತತ್ವಗಳನ್ನು ಶಾಸ್ತ್ರೀಜಿಯವರೂ ಸಹ ತಮ್ಮ ಜೀವನದುದ್ದಕ್ಕೂ ಅನುಸರಿಸಿದರು. ಇಬ್ಬರು ಮಹನೀಯರು ದೇಶದ ರಾಜಕೀಯ ಸ್ವಾತಂತ್ರ್ಯ, ಆರ್ಥಿಕ, ಸಾಮಾಜಿಕ ಹಾಗೂ ಸವಾರ್ಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದರು ಎಂದು ಹೇಳಿದರು.

ದೇಶದ ಜನತೆಗೆ “ನನ್ನ ಜೀವನವೇ ನನ್ನ ಸಂದೇಶ” ಎಂದು ತಿಳಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮತ್ತು “ಜೈ ಜವಾನ್ ಜೈ ಕಿಸಾನ್” ಎಂದು ಘೋಷಣೆ ನೀಡಿದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read