ಬೆಂಗಳೂರು: ಇಂದಿನಿಂದ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ ಜಾರಿಯಾಗಲಿದೆ. ಗ್ರೇಟರ್ ಬೆಂಗಳೂರು ಆಡಳಿತಕ್ಕೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ.
ಇಂದಿನಿಂದ ಬಿಬಿಎಂಪಿ ಗ್ರೇಟರ್ ಬೆಂಗಳೂರು ಅಥಾರಿಟಿಯಾಗಿ ಬದಲಾವಣೆಯಾಗಲಿದೆ. ಮೇ 5ರಿಂದಲೇ ಅನ್ವಯವಾಗುವಂತೆ ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದು, ಉಪಮುಖ್ಯಮಂತ್ರಿ ಉಪಾಧ್ಯಕ್ಷರಾಗಿರುತ್ತಾರೆ. ರಾಜ್ಯ ಸರ್ಕಾರದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಗುರುವಾರದಿಂದ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ”(ಜಿಬಿಎ) ಆಗಿ ಬದಲಾಗಲಿದ್ದು, ಹಾಲಿ ಬಿಬಿಎಂಪಿಯ 225 ವಾರ್ಡ್ ವ್ಯಾಪ್ತಿಯನ್ನೇ ಜಿಬಿಎ ವ್ಯಾಪ್ತಿ ಎಂದು ಅಧಿಸೂಚಿಸಲಾಗಿದೆ. ಹೊಸ ವ್ಯವಸ್ಥೆ ಪೂರ್ಣ ಜಾರಿಗೆ ಬರುವವರೆಗೆ ಹಾಲಿ ಪಾಲಿಕೆ ಪ್ರದೇಶ ವ್ಯಾಪ್ತಿಯಲ್ಲಿಯೇ ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ನಂತರ ಗ್ರೇಟರ್ ಬೆಂಗಳೂರು ಅಧಿಕಾರದ ಅಡಿ ಮೂರರಿಂದ ಐದು ಪಾಲಿಕೆಗಳು ರಚನೆಯಾಗಲಿವೆ.
ಬಿಬಿಎಂಪಿ ಆಡಳಿತಾಧಿಕಾರಿಯೇ ಜಿಬಿಎ ಆಡಳಿತಾಧಿಕಾರಿಗಳಾಗಿ, ಬಿಬಿಎಂಪಿ ಮುಖ್ಯ ಆಯುಕ್ತರು ಜಿಬಿಎ ಮುಖ್ಯ ಆಯುಕ್ತರಾಗಿ ನೇಮಕವಾಗಲಿದ್ದಾರೆ. ಹೊಸ ಪಾಲಿಕೆಗಳ ರಚನೆ, ನಿಯಮ ಉಪಬಂಧಗಳ ಸಹಿತ ಇತರ ಕಾರ್ಯ ಚಟುವಟಿಕೆಗಳಿಗೆ ಜಾರಿಗೆ ಕಾಯ್ದೆ ಅವಕಾಶ ಕಲ್ಪಿಸಲಿದೆ. ಜಿಬಿಎ ವ್ಯಾಪ್ತಿಯಲ್ಲಿ ತಲಾ 150 ವಾರ್ಡ್ ಮೀರದಂತೆ ಪಾಲಿಕೆ ರಚಿಸಲು ಅವಕಾಶವಿದೆ. ಬಿಬಿಎಂಪಿ ವ್ಯಾಪ್ತಿಯನ್ನು ವಿಸ್ತರಣೆ ಮಾಡಿಕೊಳ್ಳಲು ಅವಕಾಶವಿದೆ. 709 ಚದರ ಕಿ.ಮೀ.ನಿಂದ ಒಂದು ಸಾವಿರ ಚ. ಕಿ.ಮೀ. ಗೆ ಹೊಂದಿಕೊಂಡಿರುವ ಮತ್ತು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಪ್ರದೇಶ ಜಿಬಿಎ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡು ಮೂರು ಅಥವಾ ಐದು ಪಾಲಿಕೆ ರಚಿಸಲು ಸರ್ಕಾರ ಚಿಂತನೆ ನಡೆಸಿದೆ.
ಗ್ರೇಟರ್ ಬೆಂಗಳೂರು ಕಾಯ್ದೆಯಡಿ ಮೂರು ಹಂತದ ಆಡಳಿತ ವ್ಯವಸ್ಥೆ ಜಾರಿಗೆ ಬರಲಿದೆ. ಮೊದಲ ಹಂತದಲ್ಲಿ ಜಿಬಿಎ ಅಡಿಯಲ್ಲಿ ಬೆಂಗಳೂರಿಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ಸಂಸ್ಥೆಗಳು ಒಂದು ಗೂಡಲಿದೆ. ಎರಡನೇ ಹಂತದಲ್ಲಿ ಪಾಲಿಕೆಗಳು ರಚನೆಯಾಗಿ ಕಾರ್ಯನಿರ್ವಹಿಸಲಿದ್ದು, ಮೂರನೇ ಹಂತದಲ್ಲಿ ಪ್ರತಿ ಪಾಲಿಕೆಗಳಲ್ಲಿ ವಾರ್ಡ್ ಮಟ್ಟದ ಸಮಿತಿ ರಚನೆಯಾಗುತ್ತದೆ. ಎಲ್ಲಾ ಹಂತಗಳು ಸರ್ಕಾರದ ಕಣ್ಗಾವಲಿನಲ್ಲಿ ನಡೆಯುತ್ತದೆ.