BIG NEWS: ಉಚಿತ ಕಾನೂನು ನೆರವು ಪ್ರತಿಯೊಬ್ಬರ ಮೂಲಭೂತ ಹಕ್ಕು; ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ

ನವದೆಹಲಿ: ಕಾನೂನು ನೆರವನ್ನು ಉಚಿತವಾಗಿ ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಬಡವರು ಎನ್ನುವ ಕಾರಣಕ್ಕೆ ಅವರಿಗೆ ಒದಗಿಸುವ ಕಾನೂನು ನೆರವು ಕಡಿಮೆ ಗುಣಮಟ್ಟದಿಂದ ಇರಕೂಡದು ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ. ಕೈದಿಗೂ ಕೂಡ ಕಾನೂನು ನೆರವು ಪಡೆಯುವ ಮೂಲಭೂತ ಹಕ್ಕು ಇದ್ದು, ಸಂವಿಧಾನದ 21ನೇ ವಿಧಿ ಅಡಿ ಈ ಅಂಶವನ್ನು ಗುರುತಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ ವಿ. ವಿಶ್ವನಾಥನ್ ಅವರಿದ್ದ ನ್ಯಾಯಪೀಠ ತಿಳಿಸಿದೆ.

ಸಾಮಾಜಿಕ ಕಾರ್ಯಕರ್ತ ಸುಹಾಸ್ ಚಕ್ಕಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಚಾರಣಾ ಕೈದಿಗಳು ಅಥವಾ ಅಪರಾಧಿಗಳೇ ಇರಲಿ ಎಲ್ಲಾ ಕೈದಿಗಳಿಗೆ ಉಚಿತ ಕಾನೂನು ನೆರವು ದೊರೆಯುವಂತಾಗಬೇಕು. ಈ ಕುರಿತು ಕಾನೂನು ಸೇವೆಗಳ ಪ್ರಾಧಿಕಾರದ ಕಾಯಿದೆ 1987ರ ಅಡಿ ಅನೇಕ ನಿರ್ದೇಶನಗಳನ್ನು ನೀಡಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ವಿವಿಧ ಹಂತಗಳಲ್ಲಿ ಕಾನೂನು ನೆರವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಾನೂನು ಸೇವೆಗಳ ಪ್ರಾಧಿಕಾರಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ಮುಂದುವರಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಪೋಲಿಸ್ ಠಾಣೆ, ಅಂಚೆ ಕಚೇರಿ, ಬಸ್ ಮತ್ತು ರೈಲು ನಿಲ್ದಾಣ ಸೇರಿ ಪ್ರಮುಖ ಸ್ಥಳಗಳಲ್ಲಿ ಸಮೀಪದ ಕಾನೂನು ನೆರವು ಘಟಕ, ಕಚೇರಿಗಳ ವಿಳಾಸ, ಸಂಪರ್ಕ ಸಂಖ್ಯೆಗಳನ್ನು ಪ್ರದರ್ಶಿಸಬೇಕು. ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್ ನಲ್ಲಿ ಮಾಹಿತಿ ಇರಬೇಕು. ಕಾನೂನು ನೆರವು ಕುರಿತ ಮಾಹಿತಿ ಇರುವ ಕಿರು ಪುಸ್ತಕಗಳನ್ನು ರಾಜ್ಯಗಳ ಸ್ಥಳೀಯ ಭಾಷೆಗಳಲ್ಲಿ ಮುದ್ರಿಸಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಕಾನೂನು ಸೇವೆಗಳ ಪ್ರಾಧಿಕಾರಗಳಿಂದ ದೊರೆಯುವ ಪ್ರಯೋಜನದ ಬಗ್ಗೆ ದೇಶಾದ್ಯಂತ ಪ್ರಚಾರ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read