ಬೆಂಗಳೂರು: ನಿವೇಶನ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವುದಾಗಿ ಆರೋಪಿಸಿ ರಿಯಲ್ ಎಸ್ಟೇಟ್ ಸಂಸ್ಥೆ ಮತ್ತು ಕಿರುತೆರೆ ಕಲಾವಿದರ ಸಂಘದ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ‘ಬಿಗ್ ಬಾಸ್’ ಸ್ಪರ್ಧಿಯಾಗಿದ್ದ ಭಾವನಾ ಬೆಳೆಗೆರೆ ಸೇರಿ ಹಲವಾರು ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಎ.ಎಸ್.ಬಿ. ಡೆವಲಪರ್ಸ್ ಅಂಡ್ ಪ್ರಮೋಟರ್ಸ್ ಮಾಲೀಕ ಭಗೀರಥ, ಕಿರುತೆರೆ ಕಲಾವಿದರ ಸಂಘದ ಪದಾಧಿಕಾರಿಗಳಾದ ಸಂಜೀವ್ ತಗಡೂರು, ರವೀಂದ್ರ, ಉಮಾಕಾಂತ್, ಗುರುಪ್ರಸಾದ್ ವಿರುದ್ಧ ಆರೋಪ ಕೇಳಿ ಬಂದಿದೆ.
ಕಿರುತೆರೆ ಕಲಾವಿದರು ಸೇರಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಂಘ ರಚಿಸಿಕೊಂಡಿದ್ದರು. ನಂತರ ಸಂಘದ ಸದಸ್ಯರಿಗೆ ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ಸಂಘ ಹೇಳಿದ್ದು, ಆಗ ಎ.ಎಸ್.ಬಿ. ಡೆವಲಪರ್ಸ್ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದರು. ಇದಕ್ಕೆ ರಚಿಸಿದ ಸಮಿತಿಯಲ್ಲಿ ಸಂಜೀವ್ ತಗಡೂರು, ರವೀಂದ್ರ, ಉಮಾಕಾಂತ್, ಗುರುಪ್ರಸಾದ್ ಸದಸ್ಯರಾಗಿದ್ದರು. ನಂತರ ನಿವೇಶನ ಸಂಬಂಧ 139 ಜನರಿಂದ ಹಣ ಸಂಗ್ರಹಿಸಿದ್ದರು. ಈಗ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.