ದಾವಣಗೆರೆ: ದೇವರ ಉತ್ಸವದಲ್ಲಿ ಕೆಂಡ ಹಾಯುವಾಗ ಆಯತಪ್ಪಿ ಬಿದ್ದು ನಾಲ್ವರಿಗೆ ಸುಟ್ಟ ಗಾಯಗಳಾಗಿವೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ನೆಲಹೊನ್ನೆ ಗ್ರಾಮದಲ್ಲಿ ಘಟನೆ ನಡೆದಿದೆ.
ವಿಜಯದಶಮಿ ಹಬ್ಬದ ಮಾರನೇ ದಿನ ದೇವಿಯನ್ನು ಹೊತ್ತುಕೊಂಡು ಕೆಂಡ ಹಾಯುವಾಗ ಕರೇಗೌಡ(50) ಆಕಸ್ಮಿಕವಾಗಿ ಕೆಂಡದ ಮೇಲೆ ಬಿದ್ದಿದ್ದಾರೆ. ಇದೇ ವೇಳೆ ಆಯತಪ್ಪಿದ ಮೂವರು ಕೂಡ ಕೆಂಡದ ಮೇಲೆ ಬಿದ್ದಿದ್ದು, ಸುಟ್ಟು ಗಾಯಗಳಾಗಿವೆ. ಗಾಯಗೊಂಡ ಎಲ್ಲರನ್ನೂ ದಾವಣಗೆರೆ ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರೇಗೌಡ ಗಂಭೀರವಾಗಿ ಗಾಯಗೊಂಡಿದ್ದು, ದೇಹದ ಭಾಗದ ಶೇ. 40 ರಷ್ಟು ಸುಟ್ಟಗಾಯಗಳಾಗಿವೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.