ಬೆಳಗಾವಿ: ಮಹಾರಾಷ್ಟ್ರದ NCP ನಾಯಕ ರಾಜೇಂದ್ರ ಹಗವಣೆ ಅವರ ಸೊಸೆ ವೈಷ್ಣವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರೊಬ್ಬರ ಪುತ್ರ ಪ್ರೀತಂ ಪಾಟೀಲ್ ಅವರನ್ನು ಪುಣೆ ಪಿಂಪ್ರಿ ಚಿಂಚವಾಡ ಠಾಣೆ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.
ವೈಷ್ಣವಿ ಅವರು ಪುಣೆಯ ಭುಕುಮ್ ಪ್ರದೇಶದ ರಾಜೇಂದ್ರ ಹಗವಣೆ ಅವರ ನಿವಾಸದಲ್ಲಿ ಮೇ 16ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಇದೊಂದು ಆತ್ಮಹತ್ಯೆ ಎಂದು ಆರಂಭದಲ್ಲಿ ಬಿಂಬಿಸಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯಾಗಿರುವುದು ಸಾಬೀತಾಗಿದ್ದು, ಪೊಲೀಸರು ವೈಷ್ಣವಿ ಅವರ ತಂದೆ ಅನಿಲ್ ಕಾಸ್ಪಾಟೆ ಅವರ ದೂರಿನ ಅನ್ವಯ ತನಿಖೆ ಕೈಗೊಂಡಿದ್ದಾರೆ.
ಹಗವಣೆ ಕುಟುಂಬದ ಐವರು, ವಡಗಾಂವ ಮತ್ತು ಲೋನವಾಳದ ಇಬ್ಬರು, ಸತಾರದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ, ವರದಕ್ಷಿಣೆ ಕಿರುಕುಳ ನೀಡಿ ವೈಷ್ಣವಿ ಅವರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಮಾವ ರಾಜೇಂದ್ರ ಹಗವಣೆ, ಮೈದುನ ಸುಶೀಲ್ ಅವರಿಗೆ ಆಶ್ರಯ ನೀಡಿ ಆರ್ಥಿಕ ಸಹಾಯ ಮಾಡಿದ್ದ ಆರೋಪದಡಿ ಪ್ರೀತಂ ಪಾಟೀಲ್ ಅವರನ್ನು ಸೋಮವಾರ ರಾತ್ರಿ ನಿಪ್ಪಾಣಿ ತಾಲೂಕಿನ ಕೊನಗೋಳಿಯ ನಿವಾಸದಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.