ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್(71) ಅವರು ಬುಧವಾರ ನಿಧನರಾಗಿದ್ದಾರೆ. ಮುಂಬೈ ಮೂಲದ ಅವರು ಬ್ಲಡ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಇತ್ತೀಚೆಗೆ ಲಂಡನ್‌ನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಭಾರತಕ್ಕೆ ಮರಳಿದ್ದರು.
ಗಾಯಕ್ವಾಡ್ ಭಾರತದ ಪರ 55 ಅಂತರರಾಷ್ಟ್ರೀಯ ಪಂದ್ಯಗಳನ್ನು ಮತ್ತು ಬರೋಡಾಗಾಗಿ 250 ಕ್ಕೂ ಹೆಚ್ಚು ದೇಶೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಈಡನ್ ಗಾರ್ಡನ್ಸ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಿದ್ದರು. ಕೊನೆಯದಾಗಿ 1987 ರಲ್ಲಿ ODI ಪಂದ್ಯವನ್ನು ಆಡಿದರು.
ಕಳೆದ ತಿಂಗಳು ಗಾಯಕ್ವಾಡ್ ಅವರ ವೈದ್ಯಕೀಯ ವೆಚ್ಚಕ್ಕೆ ನೆರವು ನೀಡುವಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಂಡಳಿಗೆ ಸೂಚನೆ ನೀಡಿದ್ದರು. ವಡೋದರಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಕ್ರಿಕೆಟಿಗನಿಗೆ ಆರ್ಥಿಕ ನೆರವು ನೀಡುವಂತೆ ಮಾಜಿ ನಾಯಕ ಕಪಿಲ್ ದೇವ್ ಬಿಸಿಸಿಐಗೆ ಒತ್ತಾಯಿಸಿದ್ದರು.
ಗಾಯಕ್ವಾಡ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಭಾರತೀಯ ಕ್ರಿಕೆಟ್‌ಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ.
ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ ಅಂಶುಮಾನ್ ಗಾಯಕ್ವಾಡ್ ಜೀ ಅವರನ್ನು ಸ್ಮರಿಸಲಾಗುವುದು. ಅವರು ಪ್ರತಿಭಾನ್ವಿತ ಆಟಗಾರ ಮತ್ತು ಅತ್ಯುತ್ತಮ ತರಬೇತುದಾರರಾಗಿದ್ದರು. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಮೋದಿ ತಿಳಿಸಿದ್ದಾರೆ,
ಅಂಶುಮಾನ್ 70 ಟೆಸ್ಟ್ ಇನ್ನಿಂಗ್ಸ್ ಗಳಲ್ಲಿ 30.07 ಸರಾಸರಿಯಲ್ಲಿ ಎರಡು ಶತಕ ಮತ್ತು 10 ಅರ್ಧಶತಕಗಳ ಸಹಿತ 1985 ರನ್ ಗಳಿಸಿದರು. ಅವರು 1982-83ರಲ್ಲಿ ಪಾಕಿಸ್ತಾನದ ವಿರುದ್ಧ 201 ರನ್ ಗಳಿಸಿದ್ದಾರೆ.
ಅವರ ಆಟದ ವೃತ್ತಿಜೀವನದ ನಂತರ, ಅವರು ರಾಷ್ಟ್ರೀಯ ತಂಡದ ಆಯ್ಕೆಗಾರರಾದರು ಮತ್ತು ನಂತರ 1997 ಮತ್ತು 2000 ರ ನಡುವೆ ಪುರುಷರ ಹಿರಿಯ ತಂಡದ ಮುಖ್ಯ ತರಬೇತುದಾರರಾದರು.
Shri Anshuman Gaekwad Ji will be remembered for his contribution to cricket. He was a gifted player and an outstanding coach. Pained by his demise. Condolences to his family and admirers. Om Shanti.
— Narendra Modi (@narendramodi) July 31, 2024