ಬೆಂಗಳೂರು: ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಅವರನ್ನು ಪತ್ನಿಯೇ ಬರ್ಬರವಾಗಿ ಹತ್ಯೆ ನಡೆಸಿದ್ದು, ವಿಚಾರಣೆ ವೇಳೆ ಕೊಲೆ ಮಾಡಿದ ರೀತಿಯ ಬಗ್ಗೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಹಾಗೂ ಮಗಳು ಕೃತಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪಲ್ಲವಿ ಪತಿಯನ್ನು ಹತ್ಯೆಗೈದ ರಹಸ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಒಂದು ವಾರದಿಂದ ಮನೆಯಲ್ಲಿ ಜಗಳವಾಗುತ್ತಿತ್ತು. ಓಂ ಪ್ರಕಾಶ್ ಪದೇ ಪದೇ ಗನ್ ತಂದು ನನಗೆ, ನನ್ನ ಮಗಳಿಗೆ ಬೆದರಿಕೆ ಹಾಕುತ್ತಿದ್ದರು. ಶೂಟ್ ಮಾದಿ ಸಾಯಿಸುವುದಾಗಿ ಹೇಳುತ್ತಿದ್ದರು. ಏ.20ರಂದು ಬೆಳಿಗ್ಗೆಯೂ ಬೇರೆ ಬೇರೆ ವಿಚಾರವಾಗಿ ಗಲಾಟೆಯಾಗಿತ್ತು. ಜಗಳ ವಿಕೋಪಕ್ಕೆ ಹೋಗಿ, ಓಂ ಪ್ರಕಾಶ್ ನಮ್ಮನ್ನೇ ಹತ್ಯೆ ಮಾಅಡಲು ಯತ್ನಿಸಿದ್ದಾರೆ. ನಮ್ಮ ಜೀವ ಉಳಿಸಿಕೊಳ್ಳಲು ನಾವು ಹೋರಾಡಿದೆವು ಎಂದು ತನಿಖಾಧಿಕಾರಿ ಮುಂದೆ ತಿಳಿಸಿದ್ದಾರೆ.
ಬಳಿಕ ಖಾರದಪುಡಿ ಹಾಗೂ ಅಡುಗೆ ಎಣ್ಣೆ ಅವರ ಮೇಲೆ ಎರಚಿದೆವು. ಕೈ-ಕಾಲು ಕಟ್ಟಿ ಹಾಕಿ ಚಾಕುವಿನಿಂದ ಚುಚ್ಚಿದೆವು. ತೀವ್ರ ರಕ್ತಸ್ರಾವದಿಂದ ಒಂ ಪ್ರಕಾಶ್ ಸಾವನ್ನಪ್ಪಿದ್ದಾರೆ ಎಂದು ಪತ್ನಿ ಪಲ್ಲವಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ನಿವೃತ್ತ ಐಜಿಪಿ ಹತ್ಯೆಯಲ್ಲಿ ಪತ್ನಿ ಪಲ್ಲವಿ ಜೊತೆ ಮಗಳು ಕೃತಿ ಪಾತ್ರವೂ ಇದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ.