ಬೆಳಗಾವಿ: ಕೇಂದ್ರ ಸರ್ಕಾರ 2006ರಲ್ಲಿ ಜಾರಿಗೆ ತಂದಿರುವ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯದಲ್ಲಿ ವಾಸವಿರುವ ಪರಿಶಿಷ್ಟ ಪಂಗಡದವರನ್ನು ಹೊರತುಪಡಿಸಿ ಬೇರೆ ಇತರೆ ಹಿಂದುಳಿದ ಸಮುದಾಯ ಜನರಿಗೆ ಮೂರು ತಲೆಮಾರು ಅಥವಾ 75 ವರ್ಷಗಳ ಕಾಲ ಸಾಗುವಳಿ ಮಾಡಿದ ದಾಖಲೆಗಳ ಆಧಾರದಲ್ಲಿ ಭೂಮಿ ಮಂಜೂರು ಮಾಡುವಂತೆ ನಿಯಮ ರೂಪಿಸಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಅರಣ್ಯ ಹಕ್ಕು ಮಂಜೂರಾತಿ ಅರ್ಜಿ ಸಲ್ಲಿಸಿದ 2.41 ಲಕ್ಷ ಅರ್ಜಿಗಳ ಪೈಕಿ ಕೇವಲ ಎರಡು ಸಾವಿರ ಜನರಿಗೆ ಮಾತ್ರ ಮಂಜೂರಾತಿಗೆ ಅನುಮೋದನೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಗೆ ಮಾರ್ಪಾಡು ತರವಂತೆ ಕೇಂದ್ರಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಮಾತನಾಡಿದ ಸಚಿವರು, ಕಾಯ್ದೆಯ ಪ್ರಕಾರ ಯೋಜನೆ ಅನುಷ್ಠಾನ ಮಾಡುವ ಮುಖ್ಯ ಇಲಾಖೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಾಗಿದೆ. ಅರಣ್ಯ ಇಲಾಖೆ ಸಾಗುವಳಿ ಕುರಿತು ಉಪಗ್ರಹ ಆಧಾರಿತ ಚಿತ್ರ ಹಾಗೂ ನಕ್ಷೆಗಳನ್ನು ನೀಡುತ್ತದೆ. ಅರಣ್ಯ ಹಕ್ಕು ಕಾಯ್ದೆಯಡಿ 2005 ಡಿಸೆಂಬರ್ 13ಕ್ಕಿಂತ ಹಿಂದೆ ಪರಿಶಿಷ್ಟ ವರ್ಗದವರು ಅರಣ್ಯದಲ್ಲಿ ಸಾಗುವಳಿ ಮಾಡುತ್ತಿದ್ದರೆ ಅವರಿಗೆ ಕಾಯ್ದೆ ಪ್ರಕಾರ ಮಂಜೂರಾತಿ ಮಾಡಬಹುದಾಗಿದೆ. ರಾಜ್ಯದಲ್ಲಿ ಅರಣ್ಯ ಹಕ್ಕು ಮಂಜೂರಾತಿ ಅರ್ಜಿ ಸಲ್ಲಿಸಿದ್ದ 2.90 ಲಕ್ಷ ಪರಿಶಿಷ್ಟ ಅರ್ಜಿಗಳ ಪೈಕಿ ಶೇ.30 ರಷ್ಟಕ್ಕೆ ಅನುಮೋದನೆ ನೀಡಲಾಗಿದೆ. ಕಾಯ್ದೆಗೆ ತಿದ್ದುಪಡಿ ತರುವ ವಿಚಾರ ಕೇಂದ್ರ ಸರ್ಕಾರದ ಅಂಗಳದಲ್ಲಿದೆ ಎಂದು ಹೇಳಿದರು.
ಶಾಸಕ ಅರಬೈಲು ಶಿವರಾಮ್ ಹೆಬ್ಬಾರ್ ಮಾತನಾಡಿ, ಯಲ್ಲಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 88,453 ಜನರು ಅರಣ್ಯ ಹಕ್ಕು ಮಂಜೂರಾತಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 73,859 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅರ್ಜಿ ಸಲ್ಲಿದ ಒಟ್ಟು ಜನರ ಪೈಕಿ ಶೇ.3ರಷ್ಟು ಜನರಿಗೆ ಮಂಜೂರಾತಿ ನೀಡಲಾಗಿದೆ. ಸರ್ಕಾರ ತಿರಸ್ಕರಿಸಿದ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಕೋರಿದರು.
ಕಾಯ್ದೆ ನಿಯಮಗಳ 12 ಅಂಶಗಳಲ್ಲಿ 2 ಅಂಶಗಳನ್ನು ಪೂರೈಸಿದರೆ ಭೂಮಿ ಮಂಜೂರಾತಿಗೆ ಯಾವುದೇ ಅಡೆತಡೆಗಳು ಇಲ್ಲ. ಆದರೂ ಜಿಲ್ಲಾಧಿಕಾರಿಗಳ ಸಮಿತಿಯಲ್ಲಿ ಸಾಕಷ್ಟು ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಇದರ ಜೊತೆಗೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಹೂಡಿ ಅರ್ಜಿದಾರಿಗೆ ತೊಂದರೆ ನೀಡಲಾಗುತ್ತಿದೆ. ಇದಕ್ಕೆ ಅರಣ್ಯ ಇಲಾಖೆ ಸಚಿವರು ಕಡಿವಾಣ ಹಾಕಬೇಕು ಎಂದು ಶಾಸಕ ಅರಗ ಜ್ಞಾನೇಂದ್ರ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಅರಣ್ಯ ಹಕ್ಕು ಕಾಯ್ದೆಗೆ ಮಾರ್ಪಾಡು ತರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.
