ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಗ್ರೇಡ್ 1 ಮತ್ತು 2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ನಡೆಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇದುವರೆಗೆ 2697 ನೌಕರರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದು, ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಆರಂಭಿಸಲಾಗಿದೆ. 2024 -25ರ ರಾಜ್ಯ ಬಜೆಟ್ ನಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಸುವುದಾಗಿ ಘೋಷಿಸಲಾಗಿತ್ತು. ಅಂತೆಯೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಮಂಗಳವಾರದಿಂದ ಕೌನ್ಸೆಲಿಂಗ್ ಆರಂಭಿಸಲಾಗಿದೆ. ಒಂದೇ ಸ್ಥಳದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದವರು ವರ್ಗಾವಣೆಗೆ ಅರ್ಹರಾಗಿರುತ್ತಾರೆ. ವಿಕಲಚೇತನರು, ಗಂಭೀರ ಅನಾರೋಗ್ಯ ಸಮಸ್ಯೆ ಇರುವವರಿಗೆ ವಿನಾಯಿತಿ ನೀಡಲಾಗಿದೆ.