ಬೆಂಗಳೂರು: ಹೈಕೋರ್ಟ್ ನ ನೆಲ ಮಾಳಿಗೆಯ ಲೋಕೋಪಯೋಗಿ ಇಲಾಖೆ ವಿಶೇಷ ಕಟ್ಟಡಗಳ ಉಪ ವಿಭಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿಸಿ ಬರ್ತಡೇ ಆಚರಿಸಿಕೊಂಡು ಮೋಜು ಮಸ್ತಿ ನಡೆಸಿದ ಆರೋಪದ ಮೇಲೆ ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಎ.ಟಿ. ಮೀನಾ ಸೇರಿದಂತೆ ಐವರನ್ನು ಸೇವೆಯಿಂದ ಅಮಾನತುಗೊಳಿಸಿ ಲೋಕೋಪಯೋಗಿ ಇಲಾಖೆ ಆದೇಶಿಸಿದೆ.
ದೂರಿನ ಕುರಿತಾಗಿ ವಿಚಾರಣೆ ನಡೆಸಿದ ಶಿವಮೊಗ್ಗದ ಸಂಪರ್ಕ ಮತ್ತು ಕಟ್ಟಡ ವಿಭಾಗದ ಇಲಾಖಾ ಮುಖ್ಯ ಇಂಜಿನಿಯರ್ ಸಲ್ಲಿಸಿದ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
2025ರ ಫೆಬ್ರವರಿ 22ರಂದು ಎ.ಟಿ. ಮೀನಾ ಜನ್ಮದಿನ ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಅವರೊಂದಿಗೆ ಪಾಲ್ಗೊಂಡಿದ್ದ ಸಿಬ್ಬಂದಿ ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿಸಿರುವುದು ಭದ್ರತೆ ಮತ್ತು ಕರ್ತವ್ಯ ಲೋಪವಾಗಿದೆ. ಕಚೇರಿ ಘನತೆ, ಗೌರವ ಕಾಪಾಡಿಕೊಳ್ಳುವಲ್ಲಿಯೂ ಇವರು ವಿಫಲರಾಗಿದ್ದಾರೆ. ಸರ್ಕಾರಿ ನೌಕರಿಗೆ ತರವಲ್ಲದ ರೀತಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ.
ಎ.ಟಿ. ಮೀನಾ, FDA ಜಿ.ಹೆಚ್. ಚಿಕ್ಕೇಗೌಡ, ಸಹಾಯಕ ಇಂಜಿನಿಯರ್ ಗಳಾದ ಲಾವಣ್ಯ, ನವೀನ್, ಮತ್ತು ಅಮೀನ್ ಅವರನ್ನು ಅಮಾನತು ಮಾಡಲಾಗಿದೆ.