BIG NEWS: ಬಲವಂತದ ಸಾಲ ವಸೂಲಾತಿ ತಡೆಗೆ ಎಲ್ಲಾ ಜಿಲ್ಲೆಗಳಲ್ಲಿ ‘ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ’ ಜಾರಿಗೆ ಸಿಎಂ ಸೂಚನೆ

ಬೆಂಗಳೂರು: ಮೈಕ್ರೋ ಫೈನಾನ್ಸ್‌‌ಗಳ ನಿಯಂತ್ರಣ ಸಂಬಂಧ ಇಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ಸಿಎಂ ಸಿದ್ಧರಾಮಯ್ಯ ವಿಡಿಯೋ ಸಂವಾದ ನಡೆಸಿ, ಒಂದಷ್ಟು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಸಭೆ ನಡೆಸಲಾಗಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಎಜಿ ಶಶಿಕಿರಣ್ ಶೆಟ್ಟಿ, ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮತ್ತಿತರರು ಭಾಗಿಯಾಗಿದ್ದಾರೆ.

ರಾಜ್ಯದ ಯಾವುದೇ ಜಿಲ್ಲೆಗಳಲ್ಲಿಯೂ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಜನರ ಜೀವಹಾನಿಯಾಗಬಾರದು ಎನ್ನುವುದು ನನ್ನ ಪ್ರಥಮ‌ ಆದ್ಯತೆ. ಸಾಲ ವಸೂಲಾತಿ ಸಂದರ್ಭದಲ್ಲಿ ಸಾಲ ಪಡೆದವರಿಗೆ ಯಾವುದೇ ಕಿರುಕುಳ ಉಂಟಾಗಬಾರದು ಎಂಬ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಕಾಯ್ದೆಯ ಎಲ್ಲಾ ಅಂಶಗಳನ್ನು ಪ್ರತಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ.

ಪರವಾನಿಗೆ ಪಡೆಯದ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಮೇಲೆ ನಿರಂತರ ನಿಗಾ ಇರಿಸಬೇಕು. ಪರವಾನಿಗೆ ಪಡೆದಿರುವ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ಆರ್‌ಬಿಐ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವುದನ್ನು ಖಾತ್ರಿಪಡಿಸಬೇಕು. ಬಲವಂತದ ವಸೂಲಾತಿ ಮಾಡುವವರ ವಿರುದ್ದ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು.

ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಸಹಾಯವಾಣಿ ಪ್ರಾರಂಭಿಸಲು ಸೂಚಿಸಲಾಗಿದ್ದು, ಬಲವಂತದ ಸಾಲ ವಸೂಲಾತಿ ಮಾಡುವ ಪ್ರಕರಣಗಳಲ್ಲಿ ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಬೇಕು.

ಸಾಲ ನೀಡುವವರಿಗೆ ತೊಂದರೆ ಉಂಟು ಮಾಡುವ ಯಾವುದೇ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೊಳಿಸಿಲ್ಲ. ಆದರೆ ಬಲವಂತದ ವಸೂಲಾತಿ, ಮಾನಹಾನಿ, ಕಿರುಕುಳದ ಮೂಲಕ ಸಾಲ ವಸೂಲಾತಿಯನ್ನು ತಡೆಯುವ ಉದ್ದೇಶದಿಂದ ಜಾರಿಗೆ ತರಲಾಗಿದೆ.

ಯಾವುದೇ ಜಿಲ್ಲೆಗಳಲ್ಲಿ ಸಾಲಗಾರರ ಕಿರುಕುಳ ಮುಂದುವರೆದಿರುವುದು ಗಮನಕ್ಕೆ ಬಂದರೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.

ಕಾಯ್ದೆ ಜಾರಿಗೊಳಿಸಿದ ಬಳಿಕ ಹಲವು ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದ್ದು, ಕಟ್ಟುನಿಟ್ಟಿನಿಂದ ಕಾಯ್ದೆಯ ಅಂಶಗಳನ್ನು ಜಾರಿಗೊಳಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read