ಗಾಂಧಿನಗರ: ತನಗೆ ಹೆಣ್ಣು ಮಗು ಬೇಕಿರಲಿಲ್ಲ ಎಂದು ತಂದೆಯೊಬ್ಬ ತನ್ನ 7 ವರ್ಷದ ಮಗಳನ್ನು ಕಾಲುಗೆ ತಳ್ಳಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಭೂಮಿಕಾ (7) ತಂದೆಯಿಂದಲೇ ಕೊಲೆಯಾದ ಮಗಳು. ವಿಜಯ್ ಸೋಲಂಕಿ ಮಗಳನ್ನೇ ಕೊಂದ ಅಪ್ಪ. ಪತಿ ವಿರುದ್ಧ ಪತ್ನಿ ಅಂಜನಾ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನರ್ಮದಾ ನದಿ ಕಾಲುಗೆ ತಳ್ಳಿ ಮಗಳನ್ನು ಹತ್ಯೆ ಮಾಡಿದ್ದಾನೆ ಎಂದು ಅಂಜನಾ ದೂರು ದಾಖಲಿಸಿದ್ದಾರೆ. ವಿಜಯ್ ತನ್ನ ಪತ್ನಿ ಅಂಜನಾ ಹಾಗೂ ಮಗಳೊಂದಿಗೆ ಸ್ಥಳೀಯ ದೇವಸ್ಥಾನಕ್ಕೆ ಹೋಗಿದ್ದರು. ದೇವಸ್ಥಾನದಿಂದ ಹಿಂದಿರುಗುವಾಗ ಪತ್ನಿ ಅಂಜನಾ, ತನ್ನ ತವರು ಮನೆಗೆ ಹೋಗಿ ಬರೋಣವೆಂದು ಹೇಳಿದ್ದಾಳೆ. ಇದಕ್ಕೆ ಪತಿ ಒಪ್ಪಿಲ್ಲ. ಜಗಳವಾಡಲು ಶುರುಮಾಡಿದಾನೆ. ತನಗೆ ಹೆಣ್ಣುಮಗು ಬೇಕಿರಲಿಲ್ಲ. ಗಂಡುಮಗು ಬೇಕಿತ್ತು. ನೀನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದೀಯಾ ಎಂದು ದಾರಿ ಮಧ್ಯೆಯೇ ಬಾಯಿಗೆ ಬಂದಂತೆ ಗಲಾಟೆ ಮಾಡಿದ್ದಾನೆ.
ಬಳಿಕ ರಾತ್ರಿ 8 ಗಂಟೆ ಸುಮಾರಿಗೆ ವಾಘಾವತ್ ಸೇತುವೆ ಬಳಿ ಬೈಕ್ ನಿಲ್ಲಿಸಿ ತನ್ನ ಮಗಳನ್ನು ಎಳೆದೊಯ್ದು ಕಾಲುವೆಗೆ ತಳ್ಳಿದ್ದಾನೆ. ಮಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಯಾರಿಗಾದರೂ ವಿಷಯ ಬಾಯ್ಬಿಟ್ಟರೆ ವಿಚ್ಛೇದನ ನೀಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಘಟನೆಯಿಂದ ತೀವ್ರವಾಗಿ ನೊಂದ ಪತ್ನಿ ಅಂಜನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೀನುಗಳನ್ನು ನೋಡಲು ಕಾಲುವೆ ಬಳಿ ನಿಂತಿದ್ದಾಗ ಮಗಳು ಜಾರಿ ಬಿದ್ದಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ. ತನಿಖೆ ಬಳಿಕ ಆರೋಪಿಯ ನಾಟಕ ಬಯಲಾಗಿದೆ.