ಬೆಂಗಳೂರು: ಅಳಿಯನೇ ಮಾವನನ್ನು ಬರ್ಬರವಾಗಿ ಹತ್ಯೆಗೈದಿದ್ದು, ಬಳಿಕ ಶವವನ್ನು ಅತ್ತೆ ಹಾಗೂ ಆಕೆಯ ಮಗಳು ಸೇರಿ ಪೆಟ್ರೋಲ್ ಸುರಿದು ಸುಟ್ಟು ಹಾಕಿರಿವ ಘಟನೆ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೇವನಹಳ್ಳಿ ಮೂಲದ ಬಾಬು (43) ಮೃತ ಮಾವ. ಅಳಿಯ ರಾಮಕೃಷ್ಣ ಹಾಗೂ ಅತ್ತೆಯಾಗಿರುವ ಬಾಬು ಪತ್ನಿ ಮುನಿರತ್ನ ಹಾಗೂ ಆಕೆಯ ಮಗಳು ಸೇರಿ ಕೊಲೆ ಮಾಡಿದ್ದಾರೆ. ಮೂರು ತಿಂಗಳ ಹಿಂದೆ ಬಾಬು ಪುತ್ರಿ, ರಾಮಕೃಷ್ಣನನ್ನು ಪ್ರೀತಿಸಿ ವಿವಾಹವಾಗಿದ್ದಳು. ಮಗಳು ರಾಮಕೃಷ್ಣನನ್ನು ಮದುವೆಯಾಗಿದ್ದು, ಬಾಬುಗೆ ಇಷ್ಟವಿರಲಿಲ್ಲ. ಮಗಳು ತವರಿಗೆ ಬಂದಿದ್ದಾಗ ಬಾಬು ಮನಬಂದಂತೆ ಮಗಳಿಗೆ ಬೈದಿದ್ದರಂತೆ. ಗಲಾಟೆ ನಡೆದಿದ್ದ ವೇಳೆ ಪತ್ನಿ ಮುನಿರತ್ನಗೂ ಕಪಾಳಕ್ಕೆ ಹೊಡೆದಿದ್ದರಂತೆ. ಈ ವೇಳೆ ಅತ್ತೆ ಮೇಲೆ ಕೈ ಮಾಡುತ್ತೀರಾ ಎಂದು ರಾಮಕೃಷ್ಣ, ಬಾಬು ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ.
ಅಳಯನ ಏಟಿಗೆ ಕುಸಿದು ಬಿದ್ದ ಬಾಬು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಮೂವರು ಪ್ಲಾನ್ ಮಾಡಿ ಆಂಬುಲೆನ್ಸ್ ನಲ್ಲಿ ಬಾಬು ಮೃತದೇಹವನ್ನು ಕೋಲಾರಕ್ಕೆ ರವಾನಿಸಿದ್ದಾರೆ. ಕೋಲಾರದ ಬಳಿ ಕೊಂಡೊಯ್ದು ಅಲ್ಲಿ ಪೆಟ್ರೋಲ್ ಸುರಿದು ಬಾಬು ಶವವನ್ನು ಸುಟ್ಟು ಹಾಕಿದ್ದಾರೆ. ಇದನ್ನೆಲ್ಲ ಗಮನಿಸುತ್ತಿದ್ದ ಬಾಬು ಕಿರಿಮಗಳು ನಾಲ್ಕು ದಿನಗಳ ಬಳಿಕ ಸಂಬಂಧಿಕರ ಬಳಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾಳೆ. ಬಾಬು ಸಹೋದರ ಕಾಡುಗೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಳಿಯ ರಾಮಕೃಷ್ಣ, ಅತ್ತೆ ಮುನಿರತ್ನ ಹಾಗೂ ಮಗಳು ಮೂವರನ್ನೂ ಬಂಧಿಸಿದ್ದಾರೆ.