ಥಾಣೆ: ನದಿಗೆ ಬಿದ್ದಿದ್ದ ಕರು ರಕ್ಷಿಸಲು ಹೋಗಿ ರೈತನೂ ನೀರು ಪಾಲಾಗಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಮುರ್ಬಾಡ್ ನಲ್ಲಿ ನಡೆದಿದೆ.
ಮುರ್ಬಾದ್ ನ ಪಲು ಗ್ರಾಮದ ಬಳಿ ಈ ದುರಂತ ಸಂಭವಿಸಿದೆ. ಕೃಷ್ಣ ಮೋರೆ ನೀರು ಪಲಾಗಿರುವ ರೈತ. ಧಾರಾಕಾರ ಮಳೆಯ ನಡುವೆಯೇ ರೈತ ದನಗಳನ್ನು ಮೇಯಿಸಲು ಕರೆದೊಯ್ದಿದ್ದ. ಈ ವೇಳೆ ದನದ ಗುಂಪಿನಲ್ಲಿದ್ದ ಕರು ಆಕಸ್ಮಿಕವಾಗಿ ಉಕ್ಕಿ ಹರಿಯುತ್ತಿದ್ದ ನದಿಗೆ ಬಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಇದನ್ನು ಕಂಡ ದನಗಳ ಹಿಂಡು ಅಂಬಾ ಎಂದು ಮೊರೆಯಿಡಲಾರಂಭಿಸಿವೆ. ಕಣ್ಮುಂದೆಯೇ ಕರು ನೀರುಪಾಲಾಗುತ್ತಿರುವುದನ್ನು ಕಂಡ ರೈತ ಅದನ್ನು ರಕ್ಷಿಸಲೆಂದು ತಾನೂ ನದಿಗೆ ಹಾರಿದ್ದಾರೆ. ಪ್ರವಾಹದ ಅಬ್ಬರಕ್ಕೆ ನದಿ ನೀರಿನಲ್ಲಿ ಅವರೂ ಕೊಚ್ಚಿ ಹೋಗಿದ್ದಾರೆ.
ಪೆಂಡ್ರಿ ಗ್ರಾಮದ ಬಳಿ ರೈತನ ಮೃತದೇಹ ಪತ್ತೆಯಾಗಿದೆ. ರೈತ ಹಾಗೂ ಕರು ಇಬ್ಬರೂ ಮೃತಪಟ್ಟಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.