ಬೆಂಗಳೂರು : ಎಮ್ಮೆ ಕೊಡಿಸುವುದಾಗಿ ವ್ಯಕ್ತಿಯೋರ್ವ ಖ್ಯಾತ ನಿರ್ದೇಶಕ ಪ್ರೇಮ್ ಗೆ 4.5 ಲಕ್ಷ ರೂ ವಂಚನೆ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ದೂರು ದಾಖಲಾಗಿದೆ.
ಗುಜರಾತ್ ಮೂಲದ ವನರಾಜ್ ಭಾಯ್ ಎಂಬಾತನ ವಿರುದ್ಧ ಚಂದ್ರಾಲೇಔಟ್ ಪೊಲೀಸರು ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಪ್ರೇಮ್ ಅವರ ಮ್ಯಾನೇಜರ್ , ನಟ ದಶಾಚರ ಚಂದ್ರು ದೂರು ನೀಡಿದ್ದಾರೆ.
ಪ್ರೇಮ್ ಅವರು ಹೈನುಗಾರಿಕೆ ಮಾಡಲು 2 ಎಮ್ಮೆ ಖರೀದಿಸಲು ಮುಂದಾಗಿದ್ದರು. ಈ ವೇಳೆ ವನರಾಜ್ ಪ್ರೇಮ್ ಸಂಪರ್ಕಕ್ಕೆ ಬಂದು ನಿಮಗೆ ಒಳ್ಳೆ ಎಮ್ಮೆ ಕೊಡಿಸುತ್ತೇನೆ ಎಂದು 4.5 ಲಕ್ಷ ಹಣ ಪಡೆದಿದ್ದನು. ನಂತರ ವಾಟ್ಸಾಪ್ ಮೂಲಕ ಎಮ್ಮೆಯ ವಿಡಿಯೋ ಕೂಡ ಕಳುಹಿಸಿದ್ದಾನೆ. ಕೊನೆಗೆ ಎಮ್ಮೆಯೂ ಇಲ್ಲ, ಕೊಟ್ಟ ಹಣವೂ ಇಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ವನರಾಜ್ ಎಸ್ಕೇಪ್ ಆಗಿದ್ದಾನೆ. ನಂತರ ತಾನು ಮೋಸ ಹೋದೆ ಎಂದು ಅರಿತ ಪ್ರೇಮ್ ದೂರು ದಾಖಲಿಸಿದ್ದಾರೆ. ತಾಯಿ ಭಾಗ್ಯಮ್ಮ ಅವರ ಹೆಸರಿನಲ್ಲಿ ಸ್ವಂತ ಡೈರಿ ಫಾರ್ಮ್ ನಿರ್ಮಿಸಲು ಪ್ರೇಮ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.