ಬಾಗಲಕೋಟೆ: ಬಡತನದಿಂದ ಶಿಕ್ಷಣ ಪೂರೈಸಲಾಗದ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿಗೆ ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ರಿಷಬ್ ಪಂತ್ ನೆರವು ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಚೌಡಾಪುರ ರಬಕವಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ಜ್ಯೋತಿ ಕಣಬೂರ ಅವರಿಗೆ ರಿಷಬ್ ಪಂತ್ ಸಹಾಯಹಸ್ತ ಚಾಚಿದ್ದಾರೆ.
ಕಡುಬಡತನದಲ್ಲಿರುವ ಜ್ಯೋತಿ ದ್ವಿತೀಯ ಪಿಯುಸಿಯಲ್ಲಿ ಶೇ. 83 ರಷ್ಟು ಅಂಕಗಳಿಸಿದ್ದಾರೆ. ಅವರ ತಂದೆ ತೀರ್ಥಯ್ಯ ಗ್ರಾಮದಲ್ಲಿ ಟೀ ಅಂಗಡಿ ನಡೆಸುತ್ತಿದ್ದಾರೆ. ಜಮಖಂಡಿಯ ಬಿ.ಎಲ್.ಡಿ.ಇ. ಕಾಲೇಜಿನಲ್ಲಿ ಬಿಸಿಎ ಪ್ರವೇಶಕ್ಕೆ ಜ್ಯೋತಿಗೆ 40,000 ರೂ. ಶುಲ್ಕ ಕಟ್ಟಬೇಕಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಗ್ರಾಮದ ಗುತ್ತಿಗೆದಾರ ಅನಿಲ್ ಹುಣಶಿಕಟ್ಟೆ ಅವರು ರಿಷಬ್ ಪಂತ್ ಆತ್ಮೀಯರಾದ ಸ್ನೇಹಿತ ಅಕ್ಷಯ್ ನಾಯಕ್ ಅವರನ್ನು ಸಂಪರ್ಕಿಸಿದ್ದಾರೆ. ಅಕ್ಷಯ್ ಅವರು ಈ ವಿಷಯವನ್ನು ರಿಷಬ್ ಗಮನಕ್ಕೆ ತಂದಿದ್ದು, ತಕ್ಷಣವೇ ಬಿಸಿಎ ಮೊದಲ ಸೆಮಿಸ್ಟರ್ 40,000 ರೂ. ಶುಲ್ಕವನ್ನು ಪಾವತಿಸಿದ್ದಾರೆ.
ಹೆಸರು, ಊರು ಗೊತ್ತಿಲ್ಲದ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ನೆರವಾಗುವ ಮೂಲಕ ರಿಷಬ್ ಪಂತ್ ಮಾನವೀಯತೆ ಮೆರೆದಿದ್ದಾರೆ. ಅವರ ಉಪಕಾರ ಮರೆಯುವುದಿಲ್ಲ. ನಾನು ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸುತ್ತೇನೆ. ನೆರವು ನೀಡಿದ ಅವರಿಗೆ ಧನ್ಯವಾದಗಳು ಎಂದು ಜ್ಯೋತಿ ಹೇಳಿದ್ದಾರೆ.