ಬೆಂಗಳೂರು: ನಕಲಿ ಚಿನ್ನವನ್ನು ನೀಡಿ ಜನರಿಂದ ಲಕ್ಷ ಲಕ್ಷ ಹಣ ದೋಚಿದ್ದ ಗ್ಯಾಂಗ್ ನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಸಲಿ ಚಿನ್ನ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ಆರೋಪಿಗಳು ಎಸ್ಕೇಪ್ ಆಗುತ್ತಿದ್ದರು. ನಾಲ್ವರು ಖದೀಮರನ್ನು ಬಂಧಿಸಲಾಗಿದ್ದು, ಬಂಧಿತರನ್ನು ರಾಜೇಶ್, ಬಿನ್ನಿ, ಕಲ್ಯಾಣ್, ಸಂಪತ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 65 ಲಕ್ಷ ರೂಪಾಯಿ ಹಣ ಹಾಗೂ 5 ಕೆಜಿ ನಕಲಿ ಚಿನ್ನ ಜಪ್ತಿ ಮಾಡಲಾಗಿದೆ.
ಬೆಂಗಳೂರು ಹೊರವಲಯದಲ್ಲಿ ತೆಲುಗು ಮಾತನಾಡುವವರನ್ನೇ ಟಾರ್ಗೆಟ್ ಮಾಡಿ ಕಳ್ಳರು ವಂಚಿಸುತ್ತಿದ್ದರು. ಕಳೆದ ತಿಂಗಳು ಹೊಸಕೋಟೆಗೆ ಬಂದಿದ್ದ ಗ್ಯಾಂಗ್ ಬಳ್ಳಾರಿ ಮೂಲದ ವ್ಯಕ್ತಿಯೊಬ್ಬರಿಗೆ ನಮಗೆ ಜಮೀನಿನಲ್ಲಿ ಕೆಲಸ ಮಾಡುವಾಗ ನಿಧಿಸಿಕ್ಕಿದೆ ಕಡಿಮೆ ಬೆಲೆ ಮಾರಾಟ ಮಾಡುವುದಾಗಿ ಹೇಳಿ ನಂಬಿಸಿದೆ. ನಕಲಿ ಚಿನ್ನವನ್ನು ವಿಡಿಯೋ ಕಾಲ್ ಮೂಲಕ ತೋರಿಸಿ ಲಕ್ಷ ಲಕ್ಷ ಡೀಲ್ ಮಾಡಿಕೊಂಡಿದ್ದಾರೆ. ಹೊಸಕೋಟೆ ಹೊರವಲಯದಲ್ಲಿ ಚಿನ್ನ ಕೊಡುವುದಾಗಿ ಹೇಳಿ ನಕಲಿ ಚಿನ್ನ ಕೊಟ್ಟು ಲಕ್ಷ ಲಕ್ಷ ಹಣ ಪಡೆದು ಪರಾರಿಯಾಗಿದ್ದಾರೆ.
ಚಿನ್ನ ಪಡೆದ ವ್ಯಕ್ತಿ ಪರಿಶೀಲಿಸಿದಾಗ ನಕಲಿ ಚಿನ್ನ ಎಂಬುದು ಗೊತ್ತಾಗಿ ದಂಗಾಗಿದ್ದಾರೆ. ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ರೀತಿ ವಂಚಕರು ಹಲವರಿಗೆ ಮೋಸ ಮಾಡಿದ್ದರು. ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.