BIG NEWS: 26/11 ಮುಂಬೈ ದಾಳಿಯ ʼಮಾಸ್ಟರ್‌ ಮೈಂಡ್ʼ ತಹವ್ವುರ್ ರಾಣಾ‌ ಇಂದು ಭಾರತಕ್ಕೆ ಗಡಿಪಾರು !

ಮುಂಬೈ ಭಯೋತ್ಪಾದಕ ದಾಳಿಯ (26/11) ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ತಹವ್ವುರ್ ರಾಣಾ ಬುಧವಾರ ಭಾರತಕ್ಕೆ ಗಡೀಪಾರು ಆಗಲಿದ್ದಾನೆ. ಈ ಹಿನ್ನೆಲೆಯಲ್ಲಿ ದೆಹಲಿ ಮತ್ತು ಮುಂಬೈನಲ್ಲಿರುವ ಎರಡು ಪ್ರಮುಖ ಜೈಲುಗಳಲ್ಲಿ ಅಮೆರಿಕದ ನ್ಯಾಯಾಂಗದ ಶಿಫಾರಸ್ಸಿನಂತೆ ವಿಶೇಷ ವ್ಯವಸ್ಥೆಗಳನ್ನು ರಹಸ್ಯವಾಗಿ ಮಾಡಲಾಗಿದೆ. ಭಾರತಕ್ಕೆ ಬಂದಿಳಿದ ನಂತರ ರಾಣಾನನ್ನು ಮೊದಲಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕೆ. ದೋವಲ್ ಮತ್ತು ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಪಾಕಿಸ್ತಾನ ಮೂಲದ ಕೆನಡಾ ಪ್ರಜೆಯಾಗಿರುವ ರಾಣಾ, ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯಲ್ಲಿ ಸಕ್ರಿಯ ಸದಸ್ಯನಾಗಿದ್ದ. 26/11ರ ದಾಳಿಗೆ ಗುರಿಯಾಗಬೇಕಾದ ಸ್ಥಳಗಳನ್ನು ಗುರುತಿಸಲು ಪಾಕಿಸ್ತಾನಿ-ಅಮೆರಿಕನ್ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಗೆ ಭಾರತಕ್ಕೆ ಪ್ರಯಾಣಿಸಲು ಪಾಸ್‌ಪೋರ್ಟ್‌ಗಳನ್ನು ವ್ಯವಸ್ಥೆ ಮಾಡಿದ್ದನು. ಈ ಭಯಾನಕ ದಾಳಿಯನ್ನು ಲಷ್ಕರ್ ಸಂಘಟನೆಯು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆಗೂಡಿ ಸಂಚು ರೂಪಿಸಿತ್ತು. 2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಮಾರಣಹೋಮದ ಬಗ್ಗೆ ರಾಣಾ ಸಂತಸ ವ್ಯಕ್ತಪಡಿಸಿದ್ದಲ್ಲದೆ, ಈ ಕೃತ್ಯ ಎಸಗಿದ ಉಗ್ರರಿಗೆ ಪಾಕಿಸ್ತಾನದ ಅತ್ಯುನ್ನತ ಮಿಲಿಟರಿ ಗೌರವವನ್ನು ಮರಣೋತ್ತರವಾಗಿ ನೀಡಬೇಕು ಎಂದು ಆಗ್ರಹಿಸಿದ್ದನು.

ಈವರೆಗೆ 26/11ರ ದಾಳಿಯಲ್ಲಿ ಜೀವಂತವಾಗಿ ಸಿಕ್ಕಿಬಿದ್ದ ಏಕೈಕ ಲಷ್ಕರ್ ಉಗ್ರ ಅಜ್ಮಲ್ ಕಸಬ್‌ನನ್ನು ಮಾತ್ರ ಭಾರತವು ಕಾನೂನು ಕ್ರಮಕ್ಕೆ ಒಳಪಡಿಸಿತ್ತು. ಇದೀಗ ರಾಣಾನ ಗಡೀಪಾರು ಭಾರತದ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ.

ಈ ಹಿಂದೆ 2019ರಿಂದಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸಿತ್ತು. 2019ರ ಡಿಸೆಂಬರ್‌ನಲ್ಲಿ ಭಾರತವು ಅಮೆರಿಕಕ್ಕೆ ರಾಣಾನನ್ನು ಗಡೀಪಾರು ಮಾಡುವಂತೆ ಅಧಿಕೃತ ಮನವಿಯನ್ನು ಸಲ್ಲಿಸಿತ್ತು. ಇದರ ಬೆನ್ನಲ್ಲೇ 2020ರ ಜೂನ್ 10ರಂದು ಭಾರತವು ರಾಣಾನನ್ನು ಬಂಧಿಸಿ ಗಡೀಪಾರು ಪ್ರಕ್ರಿಯೆಗೆ ಅನುವು ಮಾಡಿಕೊಡುವಂತೆ ದೂರು ದಾಖಲಿಸಿತ್ತು.

ಮುಂಬೈ ದಾಳಿಯ ರೂವಾರಿ ಎಂದು ಹೇಳಲಾದ ಐಎಸ್‌ಐನ ಮೇಜರ್ ಇಕ್ಬಾಲ್‌ನ ಆಪ್ತನಾಗಿದ್ದ ರಾಣಾ ಮತ್ತು ಡೇವಿಡ್ ಕೋಲ್ಮನ್ ಹೆಡ್ಲಿ, ಮುಂಬೈ ದಾಳಿಗೆ ಬೇಕಾದ ಪೂರ್ವಸಿದ್ಧತೆಗಳನ್ನು ಮಾಡಿದ್ದರು ಎಂದು ಅಮೆರಿಕದ ನ್ಯಾಯಾಲಯಕ್ಕೆ ಎರಡೂ ರಾಷ್ಟ್ರಗಳು ಸಲ್ಲಿಸಿದ ದಾಖಲೆಗಳು ತಿಳಿಸುತ್ತವೆ. ತನಿಖಾಧಿಕಾರಿಗಳ ಪ್ರಕಾರ, ದಾಳಿಗೂ ಮುನ್ನ ರಾಣಾ ದುಬೈ ಮೂಲಕ ಮುಂಬೈಗೆ ಆಗಮಿಸಿ ಎಲ್ಲಾ ವ್ಯವಸ್ಥೆಗಳು ನಿಖರವಾಗಿ ಜಾರಿಯಾಗಿದೆಯೇ ಎಂದು ಖಚಿತಪಡಿಸಿಕೊಂಡಿದ್ದನು. “2008ರ ನವೆಂಬರ್ 11 ರಿಂದ ನವೆಂಬರ್ 21 ರವರೆಗೆ ಭಾರತಕ್ಕೆ ಭೇಟಿ ನೀಡಿದ್ದ ರಾಣಾ ಪವಾಯಿಯ ರೆನೆಸಾನ್ಸ್ ಹೋಟೆಲ್‌ನಲ್ಲಿ ತಂಗಿದ್ದನು. ಅವನು ತೆರಳಿದ ಐದು ದಿನಗಳ ನಂತರ ದಾಳಿ ನಡೆದಿತ್ತು” ಎಂದು ಪೊಲೀಸ್ ದಾಖಲೆಯೊಂದು ಉಲ್ಲೇಖಿಸುತ್ತದೆ.

ನ್ಯಾಯಾಂಗ ಇಲಾಖೆಯ ದಾಖಲೆಯ ಪ್ರಕಾರ, ರಾಣಾ ಮತ್ತು ಹೆಡ್ಲಿ 2009ರಲ್ಲಿ ಡೆನ್ಮಾರ್ಕ್‌ನ ಪತ್ರಿಕೆಯೊಂದರ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದಾಗ ಮತ್ತು 2005 ರಿಂದ 2009 ರವರೆಗೆ ಲಷ್ಕರ್‌ಗೆ ಹಣಕಾಸಿನ ನೆರವು ನೀಡುತ್ತಿದ್ದಾಗ ಎಫ್‌ಬಿಐನಿಂದ ಬಂಧಿಸಲ್ಪಟ್ಟರು. ಹೆಡ್ಲಿ ಅಮೆರಿಕದ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದು, 2006ರ ಬೇಸಿಗೆಯ ಆರಂಭದಲ್ಲಿ ತಾನು ಮತ್ತು ಇಬ್ಬರು ಲಷ್ಕರ್ ಸದಸ್ಯರು ಮುಂಬೈನಲ್ಲಿ ಕಣ್ಗಾವಲು ಚಟುವಟಿಕೆಗಳಿಗೆ ಮುಖವಾಡವಾಗಿ ವಲಸೆ ಕಚೇರಿಯನ್ನು ಸ್ಥಾಪಿಸುವ ಬಗ್ಗೆ ಚರ್ಚಿಸಿದ್ದರು ಎಂದು ತಿಳಿಸಿದ್ದನು. ಹೆಡ್ಲಿ ಚಿಕಾಗೋಗೆ ಪ್ರಯಾಣಿಸಿ ತನ್ನ ಬಾಲ್ಯದ ಗೆಳೆಯ ರಾಣಾಗೆ ಭಾರತದಲ್ಲಿ ಸಂಭಾವ್ಯ ಗುರಿಗಳನ್ನು ಗುರುತಿಸುವ ತನ್ನ ನಿಯೋಜನೆಯ ಬಗ್ಗೆ ಮಾಹಿತಿ ನೀಡಿದ್ದನು.

ಅವರ ನಡುವಿನ ತಿಳುವಳಿಕೆ ಎಷ್ಟಿತ್ತೆಂದರೆ, 2009ರ ಬೇಸಿಗೆಯ ಕೊನೆಯಲ್ಲಿ ರಾಣಾ ಮತ್ತು ಹೆಡ್ಲಿ, ರಾಣಾಗೆ ನೀಡಲಾಗಿದ್ದ ಹಣವನ್ನು ಡೆನ್ಮಾರ್ಕ್‌ನಲ್ಲಿ ಹೆಡ್ಲಿಯ ಕಾರ್ಯಕ್ಕೆ ಬಳಸಿಕೊಳ್ಳಲು ಒಪ್ಪಿಕೊಂಡಿದ್ದರು. ಅಲ್ಲದೆ, ರಾಣಾ, ಹೆಡ್ಲಿಯಂತೆ ನಟಿಸಿ ಡೆನ್ಮಾರ್ಕ್‌ನ ಪತ್ರಿಕೆಗೆ ಇಮೇಲ್ ಕಳುಹಿಸಿದ್ದನೆಂದು ಸಾಕ್ಷ್ಯಗಳು ತೋರಿಸುತ್ತವೆ. ಮುಂಬೈ ದಾಳಿಗಾಗಿ, ಚಿಕಾಗೋ ಮತ್ತು ಇತರ ಕಡೆಗಳಲ್ಲಿ ಫಸ್ಟ್ ವರ್ಲ್ಡ್ ಇಮಿಗ್ರೇಷನ್ ಸರ್ವೀಸಸ್ ಎಂಬ ಸಂಸ್ಥೆಯನ್ನು ಹೊಂದಿದ್ದ ರಾಣಾನಿಂದ ಮುಂಬೈನಲ್ಲಿ ಕಚೇರಿ ತೆರೆಯಲು ಹೆಡ್ಲಿ ಅನುಮತಿ ಪಡೆದಿದ್ದನು. ಹೆಡ್ಲಿ 2007 ಮತ್ತು 2008 ರ ನಡುವೆ ಐದು ಬಾರಿ ಭಾರತಕ್ಕೆ ಪ್ರಯಾಣಿಸಿ ಮುಂಬೈ ದಾಳಿಗಾಗಿ ಗುಪ್ತಚರ ಮಾಹಿತಿ ಸಂಗ್ರಹಿಸಿದ್ದನು – ಇದಕ್ಕಾಗಿ ರಾಣಾ ಸಹಾಯದಿಂದ ಪಡೆದ ಐದು ವರ್ಷಗಳ ವೀಸಾವನ್ನು ಬಳಸಿದ್ದನು.

“ಹೆಡ್ಲಿಯ ಕಥೆಯನ್ನು ಬೆಂಬಲಿಸುವ ದಾಖಲೆಗಳನ್ನು ಸಿದ್ಧಪಡಿಸಲು ಫಸ್ಟ್ ವರ್ಲ್ಡ್‌ಗೆ ಸಂಬಂಧಿಸಿದ ವ್ಯಕ್ತಿಯೊಬ್ಬರಿಗೆ ರಾಣಾ ನಿರ್ದೇಶನ ನೀಡಿದ್ದನು ಮತ್ತು ಭಾರತಕ್ಕೆ ಪ್ರಯಾಣಿಸಲು ವೀಸಾ ಪಡೆಯುವುದು ಹೇಗೆಂದು ಹೆಡ್ಲಿಗೆ ಸಲಹೆ ನೀಡಿದ್ದನು” ಎಂದು ನ್ಯಾಯಾಂಗ ಇಲಾಖೆಯ ದಾಖಲೆ ತಿಳಿಸುತ್ತದೆ. ಮುಂಬೈ ಪೊಲೀಸರು ಹೆಡ್ಲಿ ಮತ್ತು ರಾಣಾ ನಡುವಿನ ಇಮೇಲ್ ಸಂವಹನಗಳನ್ನು ಸಹ ಪತ್ತೆಹಚ್ಚಿದ್ದು, ಅದರಲ್ಲಿ ಮೇಜರ್ ಇಕ್ಬಾಲ್ ಬಗ್ಗೆ ಚರ್ಚೆಗಳು ನಡೆದಿದ್ದವು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read