ಹೈದರಾಬಾದ್: ತೆಲಂಗಾಣ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮಂಗಳವಾರ ಸಾವನ್ನಪ್ಪಿದವರ ಸಂಖ್ಯೆ 42 ಕ್ಕೆ ಏರಿದೆ.
ಆರಂಭದಲ್ಲಿ 12 ಜನ ಸಾವನ್ನಪ್ಪಿದ್ದರು. ಅವಶೇಷಗಳನ್ನು ತೆಗೆದುಹಾಕುವಾಗ ಹಲವಾರು ಶವಗಳು ಅವಶೇಷಗಳ ಅಡಿಯಲ್ಲಿ ಪತ್ತೆಯಾಗಿವೆ. ಸದ್ಯ 42 ಶವಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ ಮತ್ತು ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಕೊನೆಯ ಹಂತ ಇನ್ನೂ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿತೋಷ್ ಪಂಕಜ್ ತಿಳಿಸಿದ್ದಾರೆ. ಸೋಮವಾರ, ಪಾಶಮೈಲಾರಂನಲ್ಲಿರುವ ಸಿಗಾಚಿ ರಾಸಾಯನಿಕ ಸ್ಥಾವರದಲ್ಲಿ ಸ್ಫೋಟ ಮತ್ತು ಬೆಂಕಿಯನ್ನು ಉಂಟಾಗಿ ಅವಘಡ ಸಂಭವಿಸಿತ್ತು.
ಸೋಮವಾರ, ತೆಲಂಗಾಣ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿ, ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದರು ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು. ರಾಜ್ಯಪಾಲರು ಕಾರ್ಮಿಕ, ಉದ್ಯೋಗ ತರಬೇತಿ ಮತ್ತು ಕಾರ್ಖಾನೆಗಳ (LETF) ಪ್ರಧಾನ ಕಾರ್ಯದರ್ಶಿಯೊಂದಿಗೆ ಮಾತನಾಡಿ, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯ ಮತ್ತು ಅತ್ಯುತ್ತಮ ವೈದ್ಯಕೀಯ ಸಹಾಯವನ್ನು ನೀಡುವಂತೆ ನಿರ್ದೇಶಿಸಿದರು.