ಹಾವೇರಿ: 43 ದಿನಗಳಾದರೂ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ಬಂಕಾಪುರದ ಹಿಂದೂ ಮಹಾ ಗಣಪತಿ ಸೇವಾ ಸಂಘ ಗಣಪತಿಯನ್ನು ವಿಸರ್ಜನೆ ಮಾಡಿಲ್ಲ.
42ನೇ ವರ್ಷದ ಅದ್ದೂರಿ ಶೋಭಾ ಯಾತ್ರೆಗೆ ಡಿಜೆ ಬಳಕೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಡಿಜೆ ಬಳಕೆಗೆ ಅನುಮತಿ ನೀಡಿದ ಹೊರತೂ ಗಣೇಶ ವಿಸರ್ಜನೆ ಮಾಡದಿರಲು ನಿರ್ಧರಿಸಲಾಗಿದೆ. ಆಗಸ್ಟ್ 12ರಂದು ಶೋಭಾ ಯಾತ್ರೆಗೆ ಗಣೇಶ ಮಂಡಳಿ ದಿನಾಂಕವನ್ನು ನಿಗದಿ ಮಾಡಿತ್ತು. ಮೆರವಣಿಗೆಗೆ ಬರದಂತೆ ಡಿಜೆ ಮಾಲೀಕರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಪೊಲೀಸರ ವಿರುದ್ಧ ಬಂಕಾಪುರ ಹಿಂದೂ ಮಹಾ ಗಣಪತಿ ಸೇವಾ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಹುಬ್ಬಳ್ಳಿ ಡಿಜೆಯನ್ನು ಬಂಕಾಪುರ ಹಿಂದೂ ಮಹಾಗಣಪತಿ ಸೇವಾ ಸಂಘದವರು ಬುಕ್ ಮಾಡಿದ್ದರು. ಆದರೆ, ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಹೀಗಾಗಿ ಮತ್ತೆ ಗಣೇಶ ಮೂರ್ತಿ ವಿಸರ್ಜನೆ ದಿನಾಂಕ ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ.