ನ್ಯೂಜಿಲೆಂಡ್‌ನಲ್ಲಿ ನಡೆದ ಆಕ್ಷನ್ ಸನ್ನಿವೇಶದಲ್ಲಿ ನಟ ವಿಷ್ಣು ಮಂಚು ಗಂಭೀರವಾಗಿ ಗಾಯಗೊಂಡಿದ್ದಾರೆ. ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ನಟ ವಿಷ್ಣು ಮಂಚು ಕೈಗೆ ಡ್ರೋನ್ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
‘ಭಕ್ತ ಕಣ್ಣಪ್ಪ’ ಸಿನಿಮಾದ ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿದ್ದು, ಡ್ರೋನ್ ನಟ ವಿಷ್ಣು ಅವರ ಕೈಗೆ ತಾಗಿ ಗಂಭೀರ ಗಾಯವಾಗಿದೆ. ತಕ್ಷಣ ಶೂಟಿಂಗ್ ನಿಲ್ಲಿಸಿ ವಿಷ್ಣು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇತ್ತೀಚೆಗೆ ಕಾಳಹಸ್ತಿ ದೇಗುಲದಲ್ಲಿ ಪೂಜೆ ನೆರವೇರಿಸಿ ಚಿತ್ರೀಕರಣ ಆರಂಭಿಸಲಾಗಿತ್ತು. ‘ಭಕ್ತ ಕಣ್ಣಪ್ಪ’ ನಟ ವಿಷ್ಣು ಮಂಚು ಅವರ ಕನಸಿನ ಯೋಜನೆ ಎಂದು ಹೇಳಲಾಗುತ್ತದೆ.
ಚಿತ್ರದಲ್ಲಿ ತೆಲುಗು ನಟ ಪ್ರಭಾಸ್, ಮಲಯಾಳಂ ನಟ ಮೋಹನ್‌ಲಾಲ್, ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಬಾಲಿವುಡ್ ಹೀರೋ ಅಕ್ಷಯ್ ಕುಮಾರ್, ನಯನತಾರಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ನಟಿಸಲಿದ್ದಾರೆ. ಒಟ್ಟಿನಲ್ಲಿ ನಾಯಕ ನಟ ವಿಷ್ಣು ಮಂಚು ಗಾಯಗೊಂಡಿರುವ ಕಾರಣ ಭಕ್ತ ಕಣ್ಣಪ್ಪ ಸಿನಿಮಾದ ಶೂಟಿಂಗ್ ಸ್ಥಗಿತಗೊಂಡಿದ್ದು, ಮತ್ತೆ ಯಾವಾಗ ಶುರುವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.