ಚಿಕ್ಕಮಗಳೂರು: ವಿದ್ಯುತ್ ಲೈನ್ ದುರಸ್ತಿ ವೇಳೆ ಕರೆಂಟ್ ಶಾಕ್ ಹೊಡೆದು ಮೆಸ್ಕಾಂ ಲೈನ್ ಮೆನ್ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹೊನ್ನೆಕೊಪ್ಪದಲ್ಲಿ ನಡೆದಿದೆ.
ಪ್ರವೀಣ್ (26) ಮೃತ ವ್ಯಕ್ತಿ. ಬಾಗಲಕೋಟೆ ಮೂಲದ ಪ್ರವೀಣ್ ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಚಿಕ್ಕಮಗಳೂರಿನ ಮೆಸ್ಕಾಂ ಕಚೇರಿಯಲ್ಲಿ ಲೈನ್ ಮೆನ್ ಆಗಿ ಕೆಲಸ ಮಾಡುತ್ತಿದ್ದರು. ಹೊನ್ನೆಕೊಪ್ಪ ಗ್ರಾಮದಲ್ಲಿ ಕರೆಂಟ್ ಕಂಬ ಹತ್ತಿ ಲೈನ್ ದುರಸ್ತಿ ಮಾಡುತ್ತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದ್ದು, ಕಂಬದಿಂದ ಕೆಳಗೆ ಬಿದ್ದಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್ ನನ್ನು ಇತರ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದರು. ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.