ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಕ್ಕೆ ಚುನಾವಣಾ ಆಯೋಗದಿಂದ ಶೋಕಾಸ್ ನೋಟಿಸ್ ಜಾರಿ

ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯಲ್ಲಿ ನೋಂದಣಿಯಾಗಿರುವ ರಾಜಕೀಯ ಪಕ್ಷಗಳು ಮೂರು ವರ್ಷಗಳಿಂದ ತನ್ನ ವಾರ್ಷಿಕ ಲೆಕ್ಕಪರಿಶೋಧಕ ಖಾತೆಗಳ ಮಾಹಿತಿಯನ್ನು ಆಯೋಗದ ಅನುಸಾರ ನಿಗದಿತ ಅವಧಿಯೊಳಗೆ ಸಲ್ಲಿಸದ ಕಾರಣ ಚುನಾವಣಾ ಆಯೋಗವು ಶೋಕಾಸ್ ನೋಟಿಸ್ ಜಾರಿಗೊಳಿಸಿದೆ ಎಂದು ಬೆಂಗಳೂರು ನಗರ ಅಪರ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಜಗದೀಶ.ಜಿ ಅವರು ತಿಳಿಸಿದ್ದಾರೆ.

ಭಾರತೀಯ ಡಾ. ಬಿ.ಆರ್. ಅಂಬೇಡ್ಕರ್ ಜನತಾ ಪಕ್ಷ, ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ, ಕನ್ನಡ ಚಳವಳಿ ವಾಟಾಳ್ ಪಕ್ಷ, ಕನ್ನಡ ಪಕ್ಷ, ಕರ್ನಾಟಕ ರಾಜ್ಯ ರೈಯೋಟ ಸಂಘ, ಕರ್ನಾಟಕ ಕಾರ್ಮಿಕರ ಪಕ್ಷ ರಾಜಕೀಯ ಪಕ್ಷವಾಗಿ ಈಗಾಗಲೇ ರಿಜಿಸ್ಟರ್ ಮಾಡಿಕೊಂಡಿದ್ದು ಆರೋಗದ ದಾಖಲೆಗಳ ಪ್ರಕಾರ ಈ ಪಕ್ಷಗಳು ಮೂರು ವರ್ಷಗಳಿಂದ (2021-22, 2022-23 ಹಾಗೂ 2023-24) ತನ್ನ ವಾರ್ಷಿಕ ಲೆಕ್ಕಪರಿಶೋಧಕ ಖಾತೆಗಳ ಮಾಹಿತಿಯನ್ನು ಆಯೋಗದ ಅನುಸಾರ ನಿಗದಿತ ಅವಧಿಯೊಳಗೆ ನಮೂನೆ ಪತ್ರದ ಮೂಲಕ ಸಲ್ಲಿಸಿರುವುದಿಲ್ಲ.

ನೋಂದಾಯಿತ ಮಾನ್ಯತೆಯನ್ನು ಪಡೆಯದ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗವು ಸಂವಿಧಾನದ 324ನೇ ವಿಧಿಯಡಿ ಜನ ಪ್ರಾತಿನಿಧ್ಯ ಕಾಯ್ದೆ 1951 ಸೆಕ್ಷನ್ 29ಎ ನಿಬಂಧನೆಗಳ ಅಡಿಯಲ್ಲಿ ಪಕ್ಷಗಳ ನೋಂದಣಿಯನ್ನು ಏಕೆ ರದ್ದು ಮಾಡಬಾರದು ಎಂದು ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿಮಾಡಿದೆ.
ನೋಟಿಸ್ ನ ಅನುಸಾರ ಪಕ್ಷದ ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿಯವರ ಸರಿಯಾಗಿ ಮಾಹಿತಿಯನ್ನೊಳಗೊಂಡ ಅಫಿಡೆವಿಟ್ನೊಂದಿಗೆ ಹಾಗೂ ಪಕ್ಷವು ಪ್ರಸ್ತಾವಿಸುವ ಎಲ್ಲಾ ಪೋಷಕ ದಾಖಲೆಗಳನ್ನು ಅಕ್ಟೋಬರ್ 14 ರೊಳಗೆ ಚುನಾವಣಾ ಆಯೋಗಕ್ಕೆ ತಲುಪಿಸಬೇಕು. ಹಾಗೇ ಪಕ್ಷದ ವಿಚಾರಣೆಯು ಅದೇ ದಿನದಂದು ನಿಗದಿಪಡಿಸಿದ್ದು, ಪಕ್ಷದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಮುಖಂಡರು ಕಡ್ಡಾಯವಾಗಿ ಹಾಜರಿರಬೇಕು.

ಒಂದು ವೇಳೆ ನಿಗದಿತ ದಿನಾಂಕದಂದು ಹಾಜರಾಗಿ ಉತ್ತರ ನೀಡದಿದ್ದಲ್ಲಿ ಪಕ್ಷದ ಯಾವುದೇ ಹೇಳಿಕೆ ಇರುವುದಿಲ್ಲವೆಂದು ಪರಿಗಣಿಸಿ, ಪಕ್ಷವನ್ನು ಸಂಪರ್ಕಿಸದೇ ಚುನಾವಣಾ ಆಯೋಗದಿಂದ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಜಗದೀಶ.ಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read