ಚಿಕ್ಕಮಗಳೂರು: ಶೃಂಗೇರಿಯ ಹರಿಹರ ಬೀದಿಯ ವೃದ್ಧ ದಂಪತಿಗೆ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕರೆ ಮಾಡಿ 37 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಿಡಿಯೋ ಕರೆ ಮಾಡಿದ ವ್ಯಕ್ತಿ ಸಿಬಿಐ ಅಧಿಕಾರಿ ಸುನಿಲ್ ಗೌತಮ್ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಹೆಸರಿನ ಆಧಾರ್ ಕಾರ್ಡ್ ಅನ್ನು ಬೇರೆ ವ್ಯಕ್ತಿ ಉಪಯೋಗಿಸಿಕೊಂಡು ಮನೆ ಲಾಂಡರಿಂಗ್ ಮಾಡುತ್ತಿದ್ದು, ಆತನನ್ನು ಬಂಧಿಸಲಾಗಿದೆ. ಪ್ರಕರಣ ಕೋರ್ಟ್ ನಲ್ಲಿ ನಡೆಯುತ್ತಿದೆ. ನಿಮ್ಮ ವಿಳಾಸ ಮತ್ತು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಆರ್ಬಿಐನಿಂದ ಪರಿಶೀಲನೆ ಮಾಡಿಸಿ ನಿಮ್ಮ ಹಣವನ್ನು ನಿಮಗೆ ವಾಪಸ್ ನೀಡುತ್ತೇವೆ ಎಂದು ತಿಳಿಸಿದ್ದಾನೆ.
ಐಡಿ ಕಾರ್ಡ್ ತೋರಿಸಿದ ವಂಚಕನನ್ನು ದಂಪತಿ ನಂಬಿದ್ದು, ಪತ್ನಿಯ ಬ್ಯಾಂಕ್ ಖಾತೆಯಿಂದ ಮೊದಲ ಹಂತವಾಗಿ 3.50 ಲಕ್ಷ ರೂ.ಗಳನ್ನು ಆತ ಹೇಳಿದ ಖಾತೆಗೆ ನೆಫ್ಟ್ ಮಾಡಿದ್ದಾರೆ. ನಂತರ ಕೆನರಾ ಬ್ಯಾಂಕ್ ಖಾತೆಯಿಂದ 5 ಲಕ್ಷ ರೂ. ಸೇರಿ ಹಂತ ಹಂತವಾಗಿ ವಂಚಕರು ದಂಪತಿಯಿಂದ 37.30 ಲಕ್ಷ ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ನಂತರ ಆತನಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ. ವಂಚನೆಗೆ ಒಳಗಾದ ಅವರು ಮೇ 2ರಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.